ಪತ್ನಿ ಕೊಂದ ಗಂಡನಿಗೆ ಜೀವಾವಧಿ ಶಿಕ್ಷೆ

Published on

ಕೊಪ್ಪಳ: ಹೆಂಡತಿ ಶೀಲ ಶಂಕಿಸಿ ಕೊಲೆಗೈದಿದ್ದ ಬಸವರಾಜ ಮಲ್ಲಪ್ಪ ಮಕ್ಕಳ್ಳಿ ಎಂಬಾತನ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಆದೇಶಿಸಿದೆ.

ಯಲಬುರ್ಗಾ ತಾಲೂಕಿನ ವಣಗೇರಿ ಗ್ರಾಮದ ಬಸವರಾಜ ಪತ್ನಿ ಅಂಬವ್ವ ಶೀಲ ಶಂಕಿಸಿ ಆಗಾಗ ಜಗಳ ತೆಗೆಯುತ್ತಿದ್ದ. ಈ ಬಗ್ಗೆ ನೆರೆಹೊರೆಯವರು ಬುದ್ಧಿ ಹೇಳಿದರೂ ಸುಧಾರಿಸಿಕೊಂಡಿರಲಿಲ್ಲ. ಆಗಾಗ ಸಣ್ಣಪುಟ್ಟ ಜಗಳ ಮಾಡಿ ಪತ್ನಿಗೆ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದ. 2017ರಲ್ಲಿ ಪತ್ನಿ ಅಂಬವ್ವ ಮಲಗಿದ್ದಾಗ ಕೊಡಲಿಯಿಂದ ಕುತ್ತಿಗೆ ಹಾಗೂ ಇತರ ಭಾಗಗಳ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದ. ಈ ಸಂಬಂಧ ಬೇವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಆಗಿದ್ದ ರಮೇಶ ರೊಟ್ಟಿ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ಬಸವರಾಜ ಮೇಲಿನ ಆರೋಪಗಳು ಸಾಬೀತಾಗಿವೆ. ಜಿಲ್ಲಾ ಪ್ರಧಾನ ನ್ಯಾಯಾಧೀಶ ಸಿ.ಚಂದ್ರಶೇಖರ ಅವರು ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಮಾ.18ರಂದು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಅಂಬಣ್ಣ ಟಿ. ಮತ್ತು ಬಂಡಿ ಅಪರ್ಣಾ ಎಂ. ಪ್ರಕರಣ ನಡೆಸಿ ವಾದ ಮಂಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net