ಕೊಪ್ಪಳ: ಚಿನ್ನದ ಸಾಲಕ್ಕೆ ಎದುರಾಗಿ ಮಾಡಿದ್ದ ವಿಮಾ ಮೊತ್ತ 9.90 ಲಕ್ಷ ರೂ.ಗೆ ವಾರ್ಷಿಕ ಶೇ.6ರಷ್ಟು ಬಡ್ಡಿದರ ವಿಧಿಸಿ ಲಾನುಭವಿಗೆ ಪಾವತಿಸುವಂತೆ ಸೂಚಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಇನ್ಸೂರೆನ್ಸ್ ಕಂಪನಿಗೆ ಆದೇಶಿಸಿದೆ.
ಗಂಗಾವತಿ ತಾಲೂಕಿನ ಕೆ.ಹಂಚಿನಾಳ ಗ್ರಾಮದ ರಮೇಶ ಎಂಬುವವರ ತಂದೆ ಸಣ್ಣ ಲಚಮಪ್ಪ ಅವರು ಆ್ಯಕ್ಸಿಸ್ ಬ್ಯಾಂಕಿನಲ್ಲಿ ಚಿನ್ನ ಅಡವಿಟ್ಟು 9.90ಲಕ್ಷ ರೂ. ಸಾಲ ಪಡೆದಿದ್ದರು. ಭದ್ರತೆಗಾಗಿ ಗುರುಗಾಮ್ನ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಕಂಪನಿ ಲಿ.ನಲ್ಲಿ ಮ್ಯಾಕ್ಸ್ ಲೈಫ್ ಗ್ರೂಪ್ ಟರ್ಮ ಲೈಫ್ ಪ್ಲಾಟಿನಮ್ ಅಶ್ಯೂರೆನ್ಸ್ ಪಾಲಸಿ ಮಾಡಿಸಿದ್ದಾರೆ. ನಾಮಿನಿಯಾಗಿ ರಮೇಶ ಹೆಸರು ಸೂಚಿಸಿದ್ದಾರೆ. 2022ರ ಸೆಪ್ಟಂಬರ್ 10ರಂದು ಸಣ್ಣ ಲಚಮಪ್ಪ ತೀರಿಕೊಂಡಿದ್ದಾರೆ. ಬಳಿಕ ರಮೇಶ ವಿಮೆ ಪರಿಹಾರ ಮೊತ್ತವನ್ನು ಬ್ಯಾಂಕಿನ ಸಾಲಕ್ಕೆ ಮರುಪಾವತಿ ಮಾಡುವಂತೆ ಅರ್ಜಿ ಸಲ್ಲಿಸಿದ್ದಾರೆ.
ವಿಮಾ ಕಂಪನಿ ವಿಮೆ ಮಾಡಿಸುವಾಗ ಸರಿಯಾದ ದಾಖಲೆ ಸಲ್ಲಿಸಿಲ್ಲವೆಂದು ಅರ್ಜಿ ತಿರಸ್ಕರಿಸಿದೆ. ಇದನ್ನು ಪ್ರಶ್ನಿಸಿ ರಮೇಶ ಆಯೋಗದಲ್ಲಿ ದೂರು ದಾಖಲಿಸಿದ್ದಾರೆ. ವಿಚಾರಣೆ ನಡೆಸಿದ ಆಯೋಗ ಜಿಲ್ಲಾ ಅಧ್ಯಕ್ಷರಾ ಜೆ.ಇ.ಸೌಭಾಗ್ಯಲಕ್ಷಿ$್ಮ ಹಾಗೂ ಸದಸ್ಯ ರಾಜು ಎನ್.ಮೇತ್ರಿ ವಾದ&ಪ್ರತಿವಾದ ಆಲಿಸಿದ್ದಾರೆ. ವಿಮಾ ಕಂಪನಿಗೆ ಸರಿಯಾದ ದಾಖಲೆ ಸಲ್ಲಿಸಿದ್ದು ಪರಿಹಾರ ಮೊತ್ತ 9.90ಲಕ್ಷ ರೂ.ಗಳನ್ನು ಸಾಲಕ್ಕೆ ಮರುಪಾವತಿ ಮಾಡಬೇಕು. ಜತೆಗೆ 9.90ಲಕ್ಷ ರೂ.ಗೆ ವಾರ್ಷಿಕ ಶೇ.6ರಷ್ಟು ಬಡ್ಡಿದರ ವಿಧಿಸಿ 45 ದಿನದಲ್ಲಿ ಪಾವತಿಸಬೇಕು. ದೂರುದಾರನಿಗೆ ಮಾನಸಿಕ ಹಿಂಸೆ ನೀಡಿದ್ದಕ್ಕೆ 10 ಸಾವಿರ ರೂ. ಮತ್ತು ಅರ್ಜಿ ಶುಲ್ಕ 5 ಸಾವಿರ ರೂ.ಗಳನ್ನು ದಂಡವಾಗಿ ಪಾವತಿಸಲೂ ಆದೇಶಿಸಿದ್ದಾರೆ.