

ಕೊಪ್ಪಳ: ಸಿಎಂ ಸಿದ್ದರಾಮಯ್ಯ ಬಗ್ಗೆ ಅವಹೇಳನವಾಗಿ ಮಾತನಾಡುವ ಶಾಸಕ ಗಾಲಿ ಜನಾರ್ದನ ರೆಡ್ಡಿ ಮಣ್ಣಿನ ಕಳ್ಳ. ಅಂಥವರಿಂದ ನಾವು ಹೇಳಿಸಿಕೊಳ್ಳಬೇಕಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಅಶೋಕ ವೃತ್ತದಲ್ಲಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಬಿಜೆಪಿಗರು ಅಧಿಕಾರಕ್ಕೆ ಬಂದ ನಂತರ ತೈಲ ಬೆಲೆ 100ರೂ. ಗಡಿ ದಾಟಿದೆ. ಅವರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಜನಾರ್ದನ ರೆಡ್ಡಿ ಸಿದ್ದರಾಮಯ್ಯ ಕಾಲಿನ ಧೂಳಿಗೆ ಸಮನಲ್ಲ. ಅವರ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ. ಬಳ್ಳಾರಿಯಲ್ಲಿ ಮಾಡಿದಂತೆ ಕೊಪ್ಪಳದಲ್ಲಿ ನಿಮ್ಮ ಆಟ ನಡೆಯುವುದಿಲ್ಲ. ನಿಮ್ಮ ಬಣ್ಣ ಬಯಲಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದ ಜನ ನಮಗೆ ಹೆಚ್ಚಿನ ಮತ ನೀಡಿ ನಿಮ್ಮ ಕಪಾಳ ಮೋಕ್ಷ ಮಾಡಿದ್ದಾರೆ. ಬಿಜೆಪಿ ಸೇರಿ ಅವರ ಓಲೈಕೆಗೆ ಮನಬಂದಂತೆ ಮಾತನಾಡಿದರೆ ನಾವು ಕೇಳುವುದಿಲ್ಲ ಎಂದು ಕಿಡಿಕಾರಿದರು.
ಅನುದಾನಕ್ಕಾಗಿ ನಮ್ಮ ಹಿಂದೆ ಅಲೆದಾಡಿದ್ದೀರಿ. ಈಗ ಸಿಎಂ ವಿರುದ್ಧವೇ ಬಾಯಿಗೆ ಬಂದಂತೆ ಮಾತನಾಡುತ್ತಿದ್ದೀರಿ. ಕೂಡಲೇ ಸಿಎಂ ಹಾಗೂ ರಾಜ್ಯದ ಜನರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ನಮ್ಮ ಪ್ರತಿಭಟನೆ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.
ಶಾಸಕ ರಾವೇಂದ್ರ ಹಿಟ್ನಾಳ ಮಾತನಾಡಿ, ಸಿದ್ದರಾಮಯ್ಯ ಜನ ಮೆಚ್ಚಿದ ನಾಯಕ. ಗ್ಯಾರಂಟಿ ಯೋಜನೆಗಳು ಬಡವರಿಗೆ ಅನುಕೂಲವಾಗಿವೆ. ಯಾರ ಮೇಲೂ ಅವಲಂಬನೆ ಇಲ್ಲದೇ ಜನ ಜೀವನ ನಡೆಸುತ್ತಿದ್ದಾರೆ. ಅಂಥವರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಬಾಯಿ ಇದೆ ಎಂದು ಮನಬಂದಂತೆ ಮಾತನಾಡುವುದಲ್ಲ. ಸಿಎಂಗೆ ನಿಂದಿಸಿದರೆ ರಾಜ್ಯದ ಜನರಿಗೆ ಅವಮಾನ ಮಾಡಿದಂತೆ. ತಕ್ಷಣ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಸಂಸದ ರಾಜಶೇಖರ ಹಿಟ್ನಾಳ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಬಯ್ಯಾಪುರ, ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿದರು. ಕಾಂಗ್ರೆಸ್ ಕಾರ್ಯಕರ್ತರು ಜನಾರ್ದನ ರೆಡ್ಡಿ ಪ್ರತಿಕೃತಿ ದಹಿಸಿ, ೋಟೋಗೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರಾದ ಕೃಷ್ಣಾ ಇಟ್ಟಂಗಿ, ಕೆ.ಎಂ.ಸೈಯ್ಯದ್, ಜನಾರ್ದನ ಹುಲಿಗಿ, ಕೃಷ್ಣಾರೆಡ್ಡಿ ಗಲಬಿ, ಮಲ್ಲು ಪೂಜಾರ, ಜ್ಯೋತಿ ಗೊಂಡಬಾಳ ಇತರರಿದ್ದರು.