ದೇಶದ ಜನತೆಗೂ ಪಂಚ ಗ್ಯಾರಂಟಿ: ಸಚಿವ ತಂಗಡಗಿ ಹೇಳಿಕೆ

congress manifesto release minister Shivaraj tangadagi guarantee scheme
ಕೊಪ್ಪಳದಲ್ಲಿ ಸಚಿವ ಶಿವರಾಜ ತಂಗಡಗಿ ಸೋಮವಾರ ಕಾಂಗ್ರೆಸ್​ ಪ್ರಣಾಳಿಕೆ ಪತ್ರ ಬಿಡುಗಡೆಗೊಳಿಸಿದರು. ಡಿಸಿಸಿ ಅಧ್ಯಕ್ಷ ಅಮರೇಗೌಡ ಬಯ್ಯಾಪುರ, ಮುನಿರಾಬಾದ್​ ಕಾಡಾ ಅಧ್ಯಕ್ಷ ಹಸನಸಾಬ್​ ದೋಟಿಹಾಳ, ಜಿಲ್ಲಾ ಮಹಿಳಾ ಕಾಂಗ್ರೆಸ್​ ಅಧ್ಯೆ ಮಾಲತಿ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ ಇದ್ದರು.
Published on

ಕೊಪ್ಪಳ: ರಾಜ್ಯದಲ್ಲಿ ನುಡಿದಂತೆ ನಡೆದು ಶೇ.98ರಷ್ಟು ಜನರಿಗೆ ಗ್ಯಾರಂಟಿ ಯೋಜನೆಗಳನ್ನು ಮುಟ್ಟಿಸಿದ್ದೇವೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ದೇಶದ ಜನತೆಗೂ ಪಂಚ ಗ್ಯಾರಂಟಿ ನೀಡುತ್ತೇವೆ. ಈ ನಿಟ್ಟಿನಲ್ಲಿ ನಮ್ಮ ವರಿಷ್ಠರು ತಯಾರಿಸಿದ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ವ್ಯಾಪಕ ಪ್ರಚಾರಕ್ಕೆ ಕಾರ್ಯಕರ್ತರನ್ನು ಅಣಿ ಮಾಡಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ನಗರದ ಖಾಸಗಿ ಹೋಟೆಲ್​ನಲ್ಲಿ ಸೋಮವಾರ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರ ಸಭೆ ನಡೆಸಿ ಮಾತನಾಡಿದರು.

ದೇಶದ ಪ್ರತಿಯೊಬ್ಬ ವಿದ್ಯಾವಂತ ಯುವಕರಿಗೆ ಉದ್ಯೋಗ ಗ್ಯಾರಂಟಿಯಾಗಿ 1 ಲಕ್ಷ ರೂ. ವೇತನ ನೀಡುವ ಯುವ ನ್ಯಾಯ, ಬಡ ಮಹಿಳೆಯರಿಗೆ ಪ್ರತಿ ವರ್ಷ 1 ಲಕ್ಷ ರೂ. ನೀಡುವ ಮಹಿಳಾ ನ್ಯಾಯ, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೈತ ನ್ಯಾಯ, ನರೇಗಾ ಕೂಲಿ ಮೊತ್ತ 400ಕ್ಕೆ ಹೆಚ್ಚಿಸುವ ಶ್ರಮಿಕ ನ್ಯಾಯ ಹಾಗೂ ದೇಶದ ಜನರಿಗೆ ಸಮಪಾಲು ನೀಡಲು ಜಾತಿವಾರು ಜನಗಣತಿ ನಡೆಸುವ ಪಾಲುದಾರಿಕೆಯ ನ್ಯಾಯ ನಮ್ಮ ಭರವಸೆಗಳಾಗಿವೆ. ಈ ಬಗ್ಗೆ ನಮ್ಮ ಗ್ಯಾರಂಟಿ ಸಮಿತಿ ಪದಾಧಿಕಾರಿಗಳಿಗೆ ತಿಳಿವಳಿಕೆ ನೀಡಿದ್ದೇವೆ. ಅವರು ಪ್ರತಿಯೊಬ್ಬರ ಮನೆ ಮನೆಗೆ ವಿಷಯ ಮುಟ್ಟಿಸುವರು ಎಂದರು.

ಕುಷ್ಟಗಿಯಿಂದ ಪ್ರಚಾರ ಆರಂಭಿಸಿದ್ದೇವೆ. ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. 1.5 ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್​ ಗೆಲ್ಲಲಿದೆ. ಗ್ಯಾರಂಟಿ ಯೋಜನೆಗಳು ನಮ್ಮ ಕೈ ಹಿಡಿಯಲಿವೆ. ನಮ್ಮ ಸಿಎಂ ನುಡಿದಂತೆ ನಡೆದಿದ್ದಾರೆ. ಬಿಜೆಪಿಯವರು ಕಳೆದ 10 ವರ್ಷದಲ್ಲಿ ಯಾವೊಂದು ಭರವಸೆ ಈಡೇರಿಸಿಲ್ಲ. ಜನರ ಖಾತೆಗೆ 15 ಲಕ್ಷ ರೂ. ಹಣ ಬಂದಿಲ್ಲ. ನೂರು ಸ್ಮಾರ್ಟ್​ ಸಿಟಿ, ವರ್ಷಕ್ಕೆ 2 ಕೋಟಿ ಉದ್ಯೋಗ ಎಲ್ಲಿ ಹೋದವು ? ಪ್ರಧಾನಿ ಮೋದಿ ಗಂಗಾವತಿಗೆ ಪ್ರಚಾರಕ್ಕೆ ಬಂದಾಗ ತುಂಗಭದ್ರಾ ಯೋಜನೆಗೆ ವಾರ್ಷಿಕ ಒಂದು ಸಾವಿರ ಕೋಟಿ ರೂ. ಕೊಡುವುದಾಗಿ ಹೇಳಿದ್ದರು. ಈವರೆಗೆ ಏನನ್ನೂ ಕೊಟ್ಟಿಲ್ಲವೆಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಮಾತನಾಡಿ, ನಮ್ಮ ವರಿಷ್ಠರಾದ ರಾಹುಲ್​ ಗಾಂಧಿ, ಮಲ್ಲಿಕಾರ್ಜುನ ರ್ಖಗೆ ಅಧ್ಯಕ್ಷತೆಯಲ್ಲಿ ವಿವಿಧ ರಾಷ್ಟ್ರೀಯ ನಾಯಕರು ಪ್ರಣಾಳಿಕೆ ಸಿದ್ಧಪಡಿಸಿದ್ದಾರೆ. ನಮ್ಮ ರಾಜ್ಯದಲ್ಲಿ ಐದು ಗ್ಯಾರಂಟಿ ಯಶಸ್ವಿಯಾಗಿ ಅನುಷ್ಠಾನಗೊಂಡಿವೆ. ಹೀಗಾಗಿ ದೇಶದ ಜನರಿಗೆ ಅವನ್ನು ನೀಡುವುದಾಗಿ ಘೋಷಿಸಿದ್ದಾರೆ. ಯುವ ನ್ಯಾಯ, ಮಹಿಳಾ ನ್ಯಾಯ, ರೈತ ನ್ಯಾಯ, ಶ್ರಮಿಕ ನ್ಯಾಯ, ಪಾಲುದಾರಿಕೆಯ ನ್ಯಾಯ ನಮ್ಮ ಭರವಸೆಗಳಾಗಿವೆ ಎಂದರು.

ಮುನಿರಾಬಾದ್​ ಕಾಡಾ ಅಧ್ಯಕ್ಷ ಹಸನಸಾಬ್​ ದೋಟಿಹಾಳ, ಜಿಲ್ಲಾ ಮಹಿಳಾ ಕಾಂಗ್ರೆಸ್​ ಅಧ್ಯೆ ಮಾಲತಿ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಬ್ಲಾಕ್​ ಅಧ್ಯಕ್ಷರಾದ ಕೃಷ್ಣಾರಡ್ಡಿ ಗಲಬಿ, ಎಂ.ಕಾಟನ್​ ಪಾಷಾ, ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಬಾಲಚಂದ್ರನ್​, ಜನಾರ್ದನ ಹುಲಿಗಿ ಸೇರಿ ಇತರರಿದ್ದರು.

ಸಿಎಂ ಸಿದ್ದರಾಮಯ್ಯ ಏ.27ರಂದು ಸಿಂಧನೂರು, 30ಕ್ಕೆ ಗಂಗಾವತಿ ಹಾಗೂ ಮೇ 1ರಂದು ಕುಷ್ಟಗಿ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ನಮ್ಮ ರಾಜ್ಯ ನಾಯಕರು ಭಾಗಿ ಆಗುವರು. ರಾಷ್ಟ್ರೀಯ ನಾಯಕರು ಬರುವ ದಿನಾಂಕ ನಿಗದಿಯಾಗಿಲ್ಲ. ಸಿಎಂ ಪ್ರಚಾರ ನಡೆಸಿದ ಕ್ಷೇತ್ರ ಬಿಟ್ಟು ಇತರ ಕ್ಷೇತ್ರಗಳಲ್ಲಿ ಅವರು ಪ್ರಚಾರ ನಡೆಸುವರು. -ಶಿವರಾಜ ತಂಗಡಗಿ. ಜಿಲ್ಲಾ ಉಸ್ತುವಾರಿ ಸಚಿವ ಕೊಪ್ಪಳ.

-ಶಿವರಾಜ ತಂಗಡಗಿ. ಜಿಲ್ಲಾ ಉಸ್ತುವಾರಿ ಸಚಿವ ಕೊಪ್ಪಳ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net