

ಕೊಪ್ಪಳ: ಮಹಿಳೆಯರು ಸಬಲೀಕರಣವಾದರೆ ಮಾತ್ರ ನಮ್ಮ ದೇಶ ಅಭಿವೃದ್ಧಿ ಆಗಲಿದೆ ಎಂದು ಕೊಪ್ಪಳ ವಿವಿ ಕುಲಪತಿ ಪ್ರೊ.ಬಿ.ಕೆ.ರವಿ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕಂಪ್ಯೂಟರ್ ಡಿಜಿಟಲ್ ಲ್ಯಾಬ್ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಕೌಶಲಯುಕ್ತ ಶಿಕ್ಷಣ ಪಡೆಯಬೇಕು. ಪ್ರತಿಭೆ ಇದ್ದರೆ ಜೀವನದಲ್ಲಿ ಯಶಸ್ವಿಯಾಗಬಹುದು. ಮಹಿಳೆಯಲ್ಲಿ ಎಲ್ಲ ಸಾಧಿಸುವ ಶಕ್ತಿ ಇದೆ. ಸೂಕ್ತ ವೇದಿಕೆ, ಪ್ರೋತ್ಸಾಹ ಅಗತ್ಯ. ಕೌಶಲದೊಂದಿಗೆ ರಾಜಕೀಯ ಸೇರಿ ಇತರ ರಂಗಗಳಲ್ಲೂ ಮಹಿಳೆಯರು ಮುಂದೆ ಬರಬೇಕು ಎಂದು ಸಲಹೆ ನೀಡಿದರು.
ಹುಬ್ಬಳ್ಳಿಯ ನಾಗರಾಜ ಹುಲಿಕಟ್ಟಿ ಮಾತನಾಡಿ, ಕಾಪೋರ್ರೆಟ್ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಎಚ್ಡಿಎಫ್ಸಿ ಬ್ಯಾಂಕ್ನಿಂದ ಕಾಲೇಜಿನಲ್ಲಿ ಕಂಪ್ಯೂಟರ್ ಡಿಜಿಟಲ್ ಲ್ಯಾಬ್ ನಿರ್ಮಿಸಲಾಗಿದೆ. ದೇಶಪಾಂಡೆ ಸ್ಕಿಲಿಂಗ್ನಿಂದ ಕೌಶಲ ತರಬೇತಿ ನೀಡಿ ಉದ್ಯೋಗ ಕೊಡಿಸಲಾಗುತ್ತಿದೆ. ಇದರಿಂದ ಗ್ರಾಮೀಣ ಮಕ್ಕಳಿಗೆ ಅನುಕೂಲ ಆಗಲಿದೆ ಎಂದರು.
ಎಚ್ಡಿಎ್ಸಿ ಬ್ಯಾಂಕ್ ಪ್ರತಿನಿಧಿ ಹನುಮಂತ ಮಾತನಾಡಿದರು. ತರಬೇತಿ ಪಡೆದು ಕೆಲಸ ಪಡೆದ ಕೃತಿಕಾ, ಸಹಿರಾ ಎಂಬುವವರಿಗೆ ಉದ್ಯೋಗ ಪತ್ರ ನೀಡಲಾಯಿತು. ಪ್ರಾಚಾರ್ಯ ಡಾ.ಗಣಪತಿ ಲಮಾಣಿ, ಡಾ.ಪ್ರದಿಪ್ ಕುಮಾರ್, ದೇಶಪಾಂಡೆ ಸ್ಕಿಲಿಂಗ್ ಸಿಬ್ಬಂದಿ ಶಾರದಮ್ಮ, ಸೂರನ್ನ, ಸಾನಿಯ, ಸಂತೋಷ, ಮಹಾಂತೇಶ್ ಇತರರಿದ್ದರು.