

ಕೊಪ್ಪಳ: ಛತ್ರಪತಿ ಶಿವಾಜಿ ಮಹಾರಾಜರು ಧೈರ್ಯ, ಶೌರ್ಯದೊಂದಿಗೆ ದಾರ್ಶನಿಕರಾಗಿದ್ದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ಸಾಗೋಣ ಎಂದು ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಾರಾಷ್ಟ್ರದಲ್ಲಿ ಜನಿಸಿದ ಶಿವಾಜಿ ಮಹಾರಾಜರು ದೇಶಕ್ಕ ಕೊಡುಗೆ ನೀಡಿದ್ದಾರೆ. ಎಲ್ಲ ಸಮುದಾಯಗಳ ಏಳಿಗೆ ಬಯಸಿದರು. ವಿದೇಶಿ ಆಕ್ರಮಣಕಾರರನ್ನು ತಮ್ಮ ಧೈರ್ಯ, ಸಾಹಸದಿಂದ ಹಿಮ್ಮೆಟ್ಟಿಸಿದರು. ನಮ್ಮ ದೇಶದಲ್ಲಿ ಅನೇಕ ಧರ್ಮ, ಜಾತಿಗಳಿದ್ದರೂ ನಾವೆಲ್ಲ ಸಹೋದರತ್ವದಿಂದ ಬಾಳುತ್ತಿದ್ದೇವೆ. ಮರಾಠರು ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸಮುದಾಯ ಅಭಿವೃದ್ಧಿಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರು ಕೆಕೆಆರ್ಡಿಬಿಯಿಂದ 50 ಲಕ್ಷ ರೂ.ನೀಡಿದ್ದಾರೆ. ನಗರಸಭೆಯಿಂದಲೂ ಅಗತ್ಯ ಸೌಲಭ್ಯ ನೀಡಲಾಗುವುದೆಂದರು.
ತಹಸೀಲ್ದಾರ್ ವಿಠ್ಠಲ ಚೌಗಲಾ ಮಾತನಾಡಿ, ಶಿವಾಜಿ ಮಹಾರಾಜರು ದೇಶ ಪ್ರೇಮಕ್ಕೆ ಹೆಸರಾಗಿದ್ದರು. ಗೇರಿಲ್ಲಾ ಯುದ್ಧ ತಂತ್ರ ಮೂಲಕ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದ್ದನ್ನು ಇತಿಹಾಸದಿಂದ ತಿಳಿಯಬಹುದು. ಭಾರತಕ್ಕೆ ಭದ್ರ ಬುನಾದಿ ಹಾಕಿದವರಲ್ಲಿ ಇವರೂ ಒಬ್ಬರು. ದೇಶದ ಉಳಿವಿಗಾಗಿ ಹೋರಾಡಿದವರೆಂದು ತಿಳಿಸಿದರು.
ಹಿರಿಯ ನ್ಯಾಯಾವಾದಿ ಸುಧೀರ ಘೋರ್ಪಡೆ ಶಿವಾಜಿ ಮಹಾರಾಜರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಚಿಣ್ಣರು ಶಿವಾಜಿ ವೇಷದಲ್ಲಿ ಕಂಗೊಳಿಸಿ ನೋಡುಗರನ್ನು ರಂಜಿಸಿದರು. ಕಾರ್ಯಕ್ರಮ ಬಳಿಕ ನಗರಾದ್ಯಂತ ಶಿವಾಜಿ ಮಹಾರಾಜರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.
ನಗರಸಭೆ ಉಪಾಧ್ಯೆ ಅಶ್ವಿನಿ ಗದುಗಿನಮಠ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಸಮುದಾಯ ಮುಖಂಡರಾದ ಕೀರಪ್ಪ ಆರೇರ್, ಕೃಷ್ಣಾ ಜಿ ಬೋಸಲೆ, ಶರಬೋಜಿ ಗಾಯಕವಾಡ, ರಾಘವೇಂದ್ರ ಹುಯಿಲಗೋಳ, ರಾಜು ಬಾಕಳೆ, ಸರೋಜಾ ಬಾಕಳೆ, ಸಾವಿತ್ರಿ ಇತರರಿದ್ದರು.