

ಕೊಪ್ಪಳ: ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಸಹೋದರ ಹಾಗೂ ನಗರಸಭೆ ಅಧಿಕಾರಿಗಳ ನಿವಾಸದ ಮೇಲೆ ಮಂಗಳವಾರ ಬೆಳಗ್ಗೆಯೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದರು.
ನಗರದ ಶಕ್ತಿ ಕೇಂದ್ರ ನಗರಸಭೆ ಕಚೇರಿಗೂ ಅಧಿಕಾರಿಗಳ ಒಂದು ತಂಡ ಭೇಟಿ ನೀಡಿ ದಾಖಲೆ ಹುಡುಕಾಟ ನಡೆಸುತ್ತಿದೆ. ಕಿರಿಯ ಅಭಿಯಂತರ ಸೋಮಲಿಂಗಪ್ಪ, ಕಂದಾಯ ನಿರೀಕ್ಷಕ ಉಜ್ವಲ್, ಪ್ರವಿಣ್ ಕಂದಾರಿ ನಿವಾಸದಲ್ಲೂ ದಾಳಿಯಾಗಿದೆ. ಕಳೆದೊಂದು ವರ್ಷದಲ್ಲಿ 300ಕ್ಕೂ ಹೆಚ್ಚು ಕಾಮಗಾರಿಗಳು ನಡೆದಿವೆ. ಇದರಲ್ಲಿ 10 ಕೋಟಿ ರೂ.ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಅಧಿಕಾರಿಗಳು ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ ಆರೋಪ ಎದುರಿಸುತ್ತಿದ್ದಾರೆ. ಈ ಸಂಬಂಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿವೆ. ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರ ತಂಡ ದಿನವಿಡೀ ಪರಿಶೀಲನೆ ನಡೆಸಿತು. ಶಿವಗಂಗಾ ನಗರದ ಜೆಇ ಸೋಮಲಿಂಗಪ್ಪ ಮನೆಯಲ್ಲಿ ಮಧ್ಯಾಹ್ನ ವೇಳೆಗೆ ಪರಿಶೀಲನೆ ಮುಗಿದಿದೆ ಎನ್ನಲಾಗಿದೆ. ನಗರಸಭೆ ಹಾಗೂ ಇತರ ಅಧಿಕಾರಿಗಳು ಮತ್ತು ಅಧ್ಯಕ್ಷ ಅಮ್ಜದ್ ಪಟೇಲ್ ಸಹೋದರನ ಮನೆಯಲ್ಲಿ ಪರಿಶೀಲನೆ ಮುಂದುವರೆದಿದೆ.