

ಕೊಪ್ಪಳ: ನಗರಸಭೆ 8 ಮತ್ತು 11ನೇ ವಾರ್ಡ್ ಉಪ ಚುನಾವಣೆ ರಂಗೇರುತ್ತಿದೆ. ಬಾಕಿ ಅವಧಿ ಕಡಿಮೆ ಇರುವ ಕಾರಣ ಆಕಾಂಗಳಲ್ಲಿ ಅಷ್ಟೊಂದು ಪೈಪೋಟಿ ಕಾಣಿಸುತ್ತಿಲ್ಲ. ಸೋವಾರ ಎರಡೂ ಸ್ಥಾನಗಳಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಂದ ತಲಾ ಒಬ್ಬೊಬ್ಬ ಅಭ್ಯರ್ಥಿ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದರು.
8ನೇ ವಾರ್ಡ್ಗೆ ಬಿಜೆಪಿಯಿಂದ ಕವಿತಾ ಬಸವರಾಜ ಗಾಳಿ, ಕಾಂಗ್ರೆಸ್ನಿಂದ ರೇಣುಕಾ ಕಲ್ಲಾಕ್ಷಪ್ಪ ಪೂಜಾರ, 11ನೇ ವಾರ್ಡ್ಗೆ ಬಿಜೆಪಿಯಿಂದ ಚನ್ನಬಸಪ್ಪ ಗವಿಸಿದ್ದಪ್ಪ ಗಾಳಿ, ಕಾಂಗ್ರೆಸ್ನಿಂದ ರಾಜಶೇಖರ ಆಡೂರು ಚುನಾವಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿಗೆ ಉಮೇದುವಾರಿಕೆ ಸಲ್ಲಿಸಿದರು. ಬಿಜೆಪಿ ಅಭ್ಯರ್ಥಿಗಳು ವಿಪ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ ಹೊರತಟ್ನಾಳ ಹಾಗೂ ಇತರ ನಾಯಕರೊಡನೆ ಆಗಮಿಸಿ ಬಲ ಪ್ರದರ್ಶಿಸಿದರು.
ಕೈ ಅಭ್ಯರ್ಥಿಗಳು ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ನಗರ ಬ್ಲಾಕ್ ಅಧ್ಯಕ್ಷ ಎಂ.ಕಾಟನ್ ಪಾಷಾ, ಪ್ರಮುಖರಾದ ಕೆ.ಎಂ.ಸೈಯ್ಯದ್, ಮಾನ್ವಿ ಪಾಷಾ, ಸಿದ್ದು ಮ್ಯಾಗೇರಿ ಸೇರಿ ಇತರ ನಾಯಕರೊಡಗೂಡಿ ಆಗಮಿಸಿದರು. ಸೋಮವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಎರಡು ವಾರ್ಡ್ಗೆ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇಬ್ಬರ ನಡುವೆ ಚುನಾವಣೆ ನಡೆಯಲಿದೆ.
ನಗರಸಭೆ 31 ಸದಸ್ಯ ಬಲ ಹೊಂದಿದ್ದು, ವಿವಿಧ ಕಾರಣಗಳಿಗೆ ಎರಡು ಸ್ಥಾನಗಳು ಖಾಲಿಯಾಗಿವೆ. ಮಂಗಳವಾರ ನಾಮಪತ್ರ ಪರಿಶೀಲನೆ ನಡೆಯಲಿದೆ. ನ.14 ಉಮೇದುವಾರಿಕೆ ಹಿಂಪಡೆಯಲು ಕೊನೇ ದಿನವಾಗಿದೆ. ನ.23ರಂದು ಮತದಾನ ನಡೆಯಲಿದೆ.