

ಕೊಪ್ಪಳ: ಕಡಲ ತೀರದ ಭಾರ್ಗವ ಡಾ.ಶಿವರಾಮ ಕಾರಂತರು ಯಾರನ್ನೋ ಮೆಚ್ಚಿಸಲು ಸಾಹಿತ್ಯ ರಚಿಸಿದವರಲ್ಲ ಎಂದು ಪ್ರೊ.ಶರಣಬಸಪ್ಪ ಬಿಳಿಎಲೆ ಅಭಿಪ್ರಾಯಪಟ್ಟರು.
ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ನಿಂದ ಹಮ್ಮಿಕೊಂಡಿದ್ದ ಕಾರಂತರ ಜನ್ಮ ದಿನಾಚರಣೆ ಹಾಗೂ ಸಾಹಿತಿಗಳಾದ ಡಾ.ಮೊಗಳ್ಳಿ ಗಣೇಶ, ಡಾ.ಪಾರ್ವತಿ ಪೂಜಾರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರಂತರು ಸಾಹಿತ್ಯ, ಬರವಣಿಗೆ ಜತೆಗೆ ಜನಪರ, ಪರಿಸರ ಪರ ಹೋರಾಟಗಳ ಮೂಲಕ ವಿಶೇಷ ವ್ಯಕ್ತಿತ್ವ ಹೊಂದಿದ್ದರು. ಸಾಹಿತ್ಯ ಗಟ್ಟಿತನದಿಂದ ಕೂಡಿತ್ತು. ಇಂದಿಗೂ ಅವರ ಬರಹಗಳು ಆಪ್ತ ಎನಿಸುತ್ತವೆ ಎಂದರು.
ಸಾಹಿತಿ ಎಸ್.ಎಂ.ಕಂಬಾಳಿಮಠ ಮಾತನಾಡಿ, ಶಿವರಾಮ ಕಾರಂತರು ಕೇವಲ ಸಾಹಿತ್ಯವಲ್ಲ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದ ಬಗ್ಗೆ ಕೃತಿಗಳನ್ನು ರಚಿಸಿದ್ದಾರೆ. ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿದು ಯಕ್ಷಗಾನ ಪ್ರದರ್ಶಿಸಿದ ದೈತ್ಯ ಪ್ರತಿಭೆ ಎಂದು ವಿವರಿಸಿದರು.
ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ ಮಾತನಾಡಿ, ಕಾರಂತರೊಂದಿಗಿನ ನೆನಪುಗಳು, ಡಾ.ಮೊಗಳ್ಳಿ ಗಣೇಶ, ಡಾ.ಪಾರ್ವತಿ ಪೂಜಾರ ಕೃತಿಗಳ ಬಗ್ಗೆ ಮಾತನಾಡಿದರು.
ಪರಿಷತ್ ಪದಾಧಿಕಾರಿಗಳಾದ ಮಹಾಂತೇಶ ನೆಲಾಗಣಿ, ಮೈಲಾರಪ್ಪ ವಂಕಿ, ಡಾ.ಬಸವರಾಜ ಗಡಾದ, ಶಿವಪ್ರಸಾದ ಹಾದಿಮನಿ ಇತರರಿದ್ದರು.