ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ಸುರಕ್ಷತೆಗಿರಲಿ ಆದ್ಯತೆ

district koppal childrens protaction meeting shekharagouda ramatnala
Published on

ಕೊಪ್ಪಳ: ರಾಜ್ಯ ಮಕ್ಕಳ ರಕ್ಷಣಾ ನೀತಿ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕೆಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶೇಖರಗೌಡ ರಾಮತ್ನಾಳ ತಿಳಿಸಿದರು.

ನಗರದ ಬಿಇಒ ಕಚೇರಿಯಲ್ಲಿ ಜಿಲ್ಲಾಡಳಿತದಿಂದ ಗುರುವಾರ ಶಿಕ್ಷಣಾಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ನುರಿತ ಶಿಕ್ಷಕರು, ಮೂಲ ಸೌಕರ್ಯ ಕಲ್ಪಿಸಿದಾಗ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ. ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಜಾರಿ ಪರಿಣಾಮಕಾರಿಯಾಗಿರಲಿ. ಆಯೋಗ ಕಾಯ್ದೆ ಜಾರಿ ಪ್ರಗತಿ ಪರಿಶೀಲನೆ ನಡೆಸಿ ಸುಧಾರಣೆಗೆ ಶ್ರಮಿಸಲಿದೆ. ಖಾಸಗಿ ಶಾಲೆಗಳಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಮುಂದುವರಿಸುತ್ತಿಲ್ಲ. ಬೇರೆಡೆ ವರ್ಗಾವಣೆ ಮಾಡುತ್ತಿವೆ. ಕೆಲ ವಿದ್ಯಾರ್ಥಿಗಳಿಗೆ ಟಿಸಿ ನೀಡದೇ ಸತಾಯಿಸಲಾಗುತ್ತಿದೆ. ಅನುದಾನಿತ, ಖಾಸಗಿ ಶಾಲೆಗಳಲ್ಲಿ ಆರ್ಟಿಇ ಮಾಹಿತಿ ಪ್ರದರ್ಶಿಸಬೇಕು. ಪೋಷಕರ ಸಮಿತಿ ರಚಿಸಿ ಸಭೆ ನಡೆಸಬೇಕು. ಮಕ್ಕಳಿಗೆ ಸಲಹಾ ಪೆಟ್ಟಿಗೆ ಇರಲಿ. ಮಕ್ಕಳ ಸಹಾಯವಾಣಿ ಸಂಖ್ಯೆ 1098/112 ಬರೆಸಿ. ಬೋಧಕ, ಬೋಧಕೇತರ ಸಿಬ್ಬಂದಿ ಪೊಲೀಸ್ ಪರಿಶೀಲನಾ ವರದಿ ಪಡೆಯಬೇಕು ಎಂದರು.

ಶಾಲಾ ವಾಹನ ನಿಗದಿತ ಬಣ್ಣ ಹೊಂದಿರಲಿ. ಅಗ್ನಿ ನಂದಕ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಜಿ.ಪಿ.ಆರ್.ಎಸ್ ವ್ಯವಸ್ಥೆ, ಸೀಟ್ ಬೆಲ್ಟ್ ಹೊಂದಿರಬೇಕು. ನಿಗದಿತ ಪ್ರಮಾಣದಷ್ಟೇ ಮಕ್ಕಳನ್ನು ಕರೆದೊಯ್ಯಬೇಕು. ಒಬ್ಬ ಮಹಿಳಾ ಪರಿಚಾರಕಿ ಕಡ್ಡಾಯವಾಗಿರಬೇಕು. ಮಕ್ಕಳ ರಕ್ಷಣಾ ವಿಷಯದಲ್ಲಿ ಆಯೋಗ ಯಾವೊಂದು ಚಿಕ್ಕ ಲೋಪ ಸಹಿಸುವುದಿಲ್ಲ. ಯಾವೊಂದು ಮಗು ಶಾಲೆಯಿಂದ ಹೊರಗುಳಿಯದಿರಲಿ. ಗ್ರಾಪಂ ಮಟ್ಟದಲ್ಲಿನ ಶಿಕ್ಷಣ ಕಾರ್ಯಪಡೆ, ಮಕ್ಕಳ ರಕ್ಷಣಾ ಸಮಿತಿ ಮರಳಿ ಶಾಲೆಗೆ ಕರೆತರಲಿ. ಅನಧಿಕೃತ ಕೋಚಿಂಗ್ ಸೆಂಟರ್ ಹಾವಳಿ ಅಧಿಕವಾಗಿವೆ. ಮಕ್ಕಳಿಗೆ ಸೂಕ್ತ ಸೌಲಭ್ಯಗಳಿಲ್ಲ. ಸುರಕ್ಷತಾ ಕ್ರಮಗಳಿಲ್ಲ. ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸಿ. ಲೋಪಗಳು ಕಂಡುಬಂದಲ್ಲಿ ಕ್ರಮ ಕೈಗೊಂಡು ವರದಿ ಸಲ್ಲಿಸಿ. ತಪ್ಪಿದಲ್ಲಿ ನಾವೇ ಸ್ವಯಂ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳುತ್ತೇವೆಂದು ತಿಳಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ, ಡಿಡಿಪಿಐ ಶ್ರೀಶೈಲ ಬಿರಾದಾರ, ಬಿಇಒಗಳು, ವಲಯ ಸಂಪನ್ಮೂಲ ಸಂಯೋಜಕರು, ಶಿಕ್ಷಣ ಸಂಯೋಜಕರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net