

ಕೊಪ್ಪಳ: ಮಕ್ಕಳನ್ನು ಬಳಸಿ ಭಿಕ್ಷಾಟನೆ ಮಾಡುವುದನ್ನು ಸಂಬಂಧಿಸಿದ ಅಧಿಕಾರಿಗಳು ತಡೆಗಟ್ಟಬೇಕು. ಅಗತ್ಯ ಜಾಗೃತಿ ಮೂಡಿಸಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ಎಸ್.ದರಗದ ಸಲಹೆ ನೀಡಿದರು.
ನಗರದಲ್ಲಿ ಜಿಲ್ಲಾಡಳಿತ, ಮಕ್ಕಳ ರಕ್ಷಣಾ ಟಕದಿಂದ ಗುರುವಾರ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ದಿನಾಚರಣೆ ಕೇವಲ ಆಚರಣೆಗೆ ಸೀಮಿತವಾಗದಿರಲಿ. ಅವರ ಏಳಿಗೆಗೆ ಶ್ರಮಿಸಬೇಕು. ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಬೇಕು. ದೈಹಿಕ, ಮಾನಸಿಕ ಸದೃಢರರನ್ನಾಗಿಸಬೇಕು. ಶಿಕ್ಷಣಕ್ಕೆ ಆದ್ಯತೆ ನೀಡಿ. ಖಾಸಗಿ ಶಿಕ್ಷಣ ಸಂಸ್ಥೆ ಮಕ್ಕಳಿಗೆ ಪೈಪೋಟಿ ನೀಡುವಂತೆ ಸರ್ಕಾರಿ ಬಾಲ ಮಂದಿರದ ಮಕ್ಕಳಿಗೆ ಶಿಕ್ಷಣ ಕೊಡಿಸಿ. ಮುಂದೆ ಅವರ ಬದುಕಿಗೆ ಪೂರಕ ಮಾರ್ಗದರ್ಶನ ನೀಡುವಂತೆ ತಿಳಿಸಿದರು.
ಬಾಲ ನ್ಯಾಯ ಮಂಡಳಿ ಅಧ್ಯಕ್ಷ, ನ್ಯಾಯಾಧೀಶ ರಮೇಶ ಎಸ್. ಗಾಣಗೇರ ಮಾತನಾಡಿ, ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳಿಗೆ ನೂತನ ಮಾದರಿ ಬಳಸಿ ಶಿಕ್ಷಣ ನೀಡಿ. ಕೌಶಲ, ಆಸಕ್ತಿಗೆ ಆದ್ಯತೆ ನೀಡಿ. ಬಾಧಿತ ಮಕ್ಕಳನ್ನು ಮುಖ್ಯವಾಹಿನಿಗೆ ತನ್ನಿ. ನಮ್ಮ ಸಂಸತಿ ಬಗ್ಗೆ ತಿಳಿಸಿ. ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ದತ್ತು ಮಾಸಾಚರಣೆ ಸಂಕಲ್ಪ ಬೋಧಿಸಲಾಯಿತು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ನಿಲೋಫರ್ ಎಸ್.ರಾಂಪುರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪರಶುರಾಮ ವೈ.ಶೆಟ್ಟೆಪ್ಪನವರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ ಕಣವಿ, ಕಲ್ವಾರಿ ಚಾಪೆಲ್ ಟ್ರಸ್ಟ್ ಮುಖ್ಯಸ್ಥ ನವನೀತ್ ಕುಮಾರ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಸರೋಜಾ ಬಾಕಳೆ, ನೇತ್ರಾ ಬಸವರಾಜ ಪಾಟೀಲ್, ಯುನಿಸೆಫ್ ಪ್ರಾದೇಶಿಕ ಸಂಯೋಜಕ ಡಾ.ಕೆ.ರಾಘವೇಂದ್ರ ಭಟ್, ಜಿಲ್ಲಾ ವ್ಯವಸ್ಥಾಪಕ ಹರೀಶ ಜೋಗಿ ಸೇರಿ ಇತರರಿದ್ದರು.