

ಕೊಪ್ಪಳ: ತಾಲೂಕಿನ ಹನುಮಳ್ಳಿ ಗ್ರಾಮದಲ್ಲಿ ಶಾಲೆಗೆ ಹೊಂದಿಕೊಂಡು ವಿದ್ಯುತ್ ಪರಿವರ್ತಕವಿದ್ದು ತೆರವುಗೊಳಿಸುವಂತೆ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯರಾದ ತಿಪ್ಪೇಸ್ವಾಮಿ ಕೆ.ಟಿ., ಶೇಖರಗೌಡ ರಾಮತ್ನಾಳ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮಕ್ಕಳ ರಕ್ಷಣಾ ಕ್ರಮಗಳನ್ನು ಪರಿಶೀಲಿಸಿ ಮಾತನಾಡಿದರು.
ಹನುಮನಳ್ಳಿಯಲ್ಲಿ ಶಾಲಾ ತಡೆಗೊಡೆಗೆ ತಾಗಿಕೊಂಡು ವಿದ್ಯುತ್ ಪರಿವರ್ತಕವಿದೆ. ಅದನ್ನು ತೆರವು ಮಾಡುವಂತೆ ಅನೇಕ ಬಾರಿ ಹೇಳಿದರೂ ಜೆಸ್ಕಾಂ ಅಧಿಕಾರಿಗಳು ತೆರವು ಮಾಡಿಲ್ಲ. ಮಳೆಗಾಲ ಆರಂಭವಾಗಿದ್ದು ಮಕ್ಕಳಲ್ಲಿ ಭಯ ಶುರುವಾಗಿದೆ. ಹೀಗಾಗಿ ಶಾಲಾ ಕೊಠಡಿಯಲ್ಲಿ ಯಾರೂ ಹೋಗದಂತ ಸ್ಥಿತಿ ನಿರ್ಮಾಣವಾಗಿದೆ. ಭೇಟಿ ವೇಳೆ ಇದನ್ನು ಗಮನಿಸಿದ ಸದಸ್ಯರು ಜೆಸ್ಕಾಂ ಸಿಬ್ಬಂದಿ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಸ್ಥರು ಮನವಿ ಸಲ್ಲಿಸಿದ ಮೇಲೂ ಕ್ರಮ ಕೈಗೊಳ್ಳದಿದ್ದಕ್ಕೆ ಕೆಂಡವಾದರು. ತಕ್ಷಣ ತೆರವು ಮಾಡುವಂತೆ ಸೂಚಿಸಿದರು. ಶಿಕ್ಷಣ, ಗ್ರಾಪಂ ಅಧಿಕಾರಿಗಳಿಗೆ ಸ್ವಚ್ಛತೆ ಕಾಪಾಡಲು ತಾಕೀತು ಮಾಡಿದರು.
ಅಲ್ಲಿಂದ ಅಂಗನವಾಡಿಗೆ ತೆರಳಿ ವೀಸಿದರು. ಮಕ್ಕಳಿಗೆ ನೀಡುತ್ತಿರುವ ಆಹಾರದ ಮಾಹಿತಿ ಪಡೆದರು. ಬಳಿಕ ಟಣಕನಕಲ್ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ತೆರಳಿದ ಸದಸ್ಯರು ಮಕ್ಕಳ ರಕ್ಷಣಾ ಕ್ರಮಗಳ ಅಳವಡಿಕೆ ಬಗ್ಗೆ ಕೇಳಿದರು. ಎಷ್ಟು ಮಕ್ಕಳಿದ್ದಾರೆ, ಊಟ, ಆಟದ ವ್ಯವಸ್ಥೆ, ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಮಕ್ಕಳ ಹಕ್ಕುಗಳ ರಕ್ಷಣೆಗೆ ವಹಿಸಿದ ಕ್ರಮಗಳನ್ನು ಪರಿಶೀಲಿಸಿದರು. ಅಲ್ಪಸಂಕ್ಯಾತರ ಕಲ್ಯಾಣಾಧಿಕಾರಿ ಅಜ್ಮೀರ್ ಅಲಿ ಸದಸ್ಯರಿಗೆ ಮಾಹಿತಿ ಒದಗಿಸಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ, ಪ್ರಾಚಾರ್ಯ ಹಾಗೂ ಬೋಧಕ ಸಿಬ್ಬಂದಿ ಇದ್ದರು.