

ಕೊಪ್ಪಳ: ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಿ. ಹೊರಗುಳಿದವರ ಪಾಲಕರ ಮನವೊಲಿಸಿ ಶಾಲೆಗೆ ಸೇರಿಸಿ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶೇಖರಗೌಡ ರಾಮತ್ನಾಳ ಸೂಚಿಸಿದರು.
ನಗರದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಮರ್ಥ್ಯಾಭಿವೃದ್ಧಿ ತರಬೇತಿ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
14 ವರ್ಷದೊಳಗಿನ ಮಕ್ಕಳು ಕಡ್ಡಾಯ ಶಿಕ್ಷಣ ಪಡೆಯಬೇಕು. ಒಂದು ವೇಳೆ ಶಾಲೆಯಿಂದ ಹೊರಗುಳಿದರೆ ದುಶ್ಚಟಕ್ಕೆ ಬಲಿಯಾಗುತ್ತಾರೆ. ಬಾಲ ಕಾರ್ಮಿಕರಾಗುತ್ತಾರೆ. ಕಿರುಕುಳ, ದೌರ್ಜನ್ಯಕ್ಕೆ ಒಳಗಾಗುವ ಸಾಧ್ಯತೆಯಿದೆ. ಬಾಲ್ಯವಿವಾಹದಂತ ಅನಿಷ್ಠ ಪದ್ಧತಿಗೆ ದೂಡಬಹುದು. ಹೀಗಾಗಿ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಿ. ಮಕ್ಕಳ ಹಕ್ಕುಗಳಿಗೆ ಧಕ್ಕೆಯಾದರೆ ಆಯೋಗ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪರಶುರಾಮ ಶೆಟ್ಟೆಪ್ಪನವರ ಮಾತನಾಡಿ, ಪ್ರತಿ ಮಗು ಸುರಕ್ಷಿತ, ರಕ್ಷಣಾತ್ಮಕ ಮತ್ತು ಸಶಕ್ತ ಪರಿಸರದಲ್ಲಿ ಬೆಳೆಯಬೇಕು. ಸರ್ಕಾರದೊಂದಿಗೆ ಪಾಲಕ, ಪೋಷಕರು ಮಕ್ಕಳ ಬೆಳವಣಿಗೆಗೆ ಸಹಕರಿಸಬೇಕು. ಉತ್ತಮ ಶಿಕ್ಷಣ ಕೊಡಿಸಬೇಕು. ರಕ್ಷಣಾತ್ಮಕ ವಾತಾವರಣ ರೂಪಿಸಿ. ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರು, ಮುಖ್ಯ ಶಿಕ್ಷಕರು ಮಕ್ಕಳ ರಕ್ಷಣೆಗೆ ಆದ್ಯತೆ ನೀಡಿ. ಕಾನೂನು ಅರಿವು ಮೂಡಿಸಿ. ಮಕ್ಕಳ ಸುರಕ್ಷತಾ ನೀತಿ ಕಡ್ಡಾಯವಾಗಿ ಅನುಷ್ಠಾನಗೊಳಿಸಿ ಎಂದು ತಿಳಿಸಿದರು.
ಡಿವೈಎಸ್ಪಿ ಮುತ್ತಣ್ಣ ಸರವಗೋಳ ಮಾತನಾಡಿ, ಯಾವುದೇ ಮಗು ದೈಹಿಕ ಅಥವಾ ಮಾನಸಿಕ ಹಿಂಸೆ, ದೌರ್ಜನ್ಯ, ರ್ನಿಲಕ್ಷ್ಯ ಅಥವಾ ಶೋಷಣೆಗೆ ಸಿಲುಕುವಂತಿಲ್ಲ. ಸರ್ಕಾರ ಮಕ್ಕಳ ರಕ್ಷಣೆಗೆ ನೀತಿ, ಕಾನೂನು ರೂಪಿಸಿದೆ. ನಮ್ಮ ಇಲಾಖೆ ಅಗತ್ಯ ಸಹಕಾರ, ನೆರವು ನೀಡಲಿದೆ ಎಂದರು.
ಡಿಡಿಪಿಐ ಶ್ರೀಶೈಲ ಬಿರಾದಾರ ಮಾತನಾಡಿ, ಶಾಲೆಯಿಂದ ಹೊರಗುಳಿದ ಮಗುವನ್ನು ಶಾಲೆಗೆ ತರುವುದು ಮುಖ್ಯ ಶಿಕ್ಷಕರು, ಸಹ ಶಿಕ್ದಕರ ಜವಾಬ್ದಾರಿ. ರಾಜ್ಯ ಮಕ್ಕಳ ಸುರಕ್ಷತಾ ನೀತಿ ಅನ್ವಯ ಶಾಲೆಗಳಲ್ಲಿ ಮಕ್ಕಳ ಸಲಹಾ ಪಟ್ಟಿಗೆ, ಮಕ್ಕಳ ಸುರಕ್ಷತಾ ಸಮಿತಿ, ಪೋಷಕರ ಸಮಿತಿ, ಸಿಬ್ಬಂದಿ ಬದ್ಧತಾ ಪತ್ರ, ಮಕ್ಕಳಿಂದ ಬದ್ಧತಾ ಪತ್ರ ಹಾಗೂ ಶೈಕ್ಷಣಿಕ ಸಂಸ್ಥೆಯು ತನ್ನದೇ ಸುರಕ್ಷತಾ ನೀತಿಯನ್ನು ಅಳವಡಿಸಿಕೊಳ್ಳುವುದು ಕಡ್ಡಾ ಎಂದು ವಿವರಿಸಿದರು.
ಯುನಿಸ್ೆ ಮಕ್ಕಳ ರಕ್ಷಣಾ ಯೋಜನೆ ಪ್ರಾದೇಶಿಕ ಸಂಯೋಜಕ ಡಾ.ಕೆ.ರಾಘವೇಂದ್ರ ಭಟ್ "ಶಾಲೆಯಲ್ಲಿದೆ ಶಿಕ್ಷಣದ ಜೊತೆ ರಕ್ಷಣೆ' ವಿಷಯ ಕುರಿತು ತರಬೇತಿ ನೀಡಿದರು. ಹರೀಶ ಜೋಗಿ ಬಾಲ್ಯವಿವಾಹ ನಿಷೇಧ ಕಾಯ್ದೆ-, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ- ಹಾಗೂ ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶ ಕುರಿತು ಮಾಹಿತಿ ನೀಡಿದರು.
ಜಿಪಂ ಮುಖ್ಯ ಯೋಜನಾಧಿಕಾರಿ ಮಂಜುನಾಥ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಪ್ರಕಾಶ ಕಡಗದ, ಜಿಲ್ಲಾ ಕಾರ್ಮಿಕ ಅಧಿಕಾರಿ ಸುಧಾ ಗರಗ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ, ಡಾ.ಸುಮಲತಾ, ಶಿವಲೀಲಾ, ಪ್ರತಿಭಾ, ಪ್ರಶಾಂತರಡ್ಡಿ ಇತರರಿದ್ದರು.