

ಕೊಪ್ಪಳ: ಬಾಲಕರ ಹಾಗೂ ಬಾಲಕಿಯರ ಬಾಲ ಮಂದಿರ ಕಟ್ಟಡ ನಿರ್ಮಾಣ ಕಾರ್ಯ ಬೇಗ ಮುಗಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶೇಖರಗೌಡ ರಾಮತ್ನಾಳ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಟಣಕನಕಲ್ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ ಕಾಮಗಾರಿ ಬುಧವಾರ ಪರಿಶೀಲಿಸಿ ಮಾತನಾಡಿದರು.
ಮಕ್ಕಳ ಪಾಲನಾ ಕೇಂದ್ರಗಳಲ್ಲಿ ಪೋಷಣೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳ ಆರೈಕೆ ಮತ್ತು ರಕ್ಷಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಪೋಷಣೆ, ರಕ್ಷಣೆ ಅವಶ್ಯವಿರುವ ಬಹಳ ಮಕ್ಕಳಿದ್ದಾರೆ. ಕಾರಣ ಬಾಲಮಂದಿರಗಳು ಜಿಲ್ಲೆಗೆ ಅತ್ಯವಶ್ಯ. ಸದ್ಯ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಸರ್ಕಾರ ಎರಡು ಬಾಲ ಮಂದಿರಗಳ ನಿಮಾರ್ಣಕ್ಕೆ ಅನುದಾನ ಬಿಡುಗಡೆ ಮಾಡಿದೆ. ಭೂಮಿಪೂಜೆ ನೆರವೇರಿಸಿ ವರ್ಷ ಕಳೆದಿದ್ದು ಕಾಮಗಾರಿ ಪ್ರಗತಿ ಕಾಣುತ್ತಿಲ್ಲ. ಬಾಲಕರ ಬಾಲಮಂದಿರದ ಬುನಾದಿ ಹಂತದಲ್ಲಿದ್ದರೆ, ಬಾಲಕಿಯರ ಬಾಲ ಮಂದರಿ ಕಟ್ಟಡ ಕಾಮಗಾರಿಯನ್ನೇ ಆರಂಭಿಸಿಲ್ಲ ಯಾಕೆಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ತಕ್ಷಣ ಕಾಮಗಾರಿಗೆ ವೇಗ ನೀಡಿ. ಗುಣಮಟ್ಟದ ಕಾಮಗಾರಿ ನಡೆಸುವಂತೆ ನಿರ್ಮಿತಿ ಕೇಂದ್ರ ಅಧಿಕಾರಿಗಳಿಗೆ ಸೂಚಿಸಿದರು. ತಪ್ಪಿದಲ್ಲಿ ನಿಮಾರ್ಣ ಕಾಮಗಾರಿ ಗುತ್ತಿಗೆ ರದ್ದುಪಡಿಸಿ, ಬೇರೆ ಸಂಸ್ಥೆಗೆ ನೀಡುವಂತೆ ಜಿಲ್ಲಾಧಿಕಾರಿಗೆ ವರದಿ ನೀಡುವುದಾಗಿ ಎಚ್ಚರಿಸಿದರು. ಕುಡಿವ ನೀರು ಸೌಲಭ್ಯ ಒದಗಿಸುವಂತೆ ತಾಪಂ ಇಒಗೆ ತಾಕೀತು ಮಾಡಿದರು. ಭೂಮಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹೆಸರಿನಲ್ಲಿದ್ದು, ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರ ಹೆಸರಿಗೆ ವರ್ಗಾಯಿಸುವಂತೆ ತಹಸೀಲ್ದಾರ್ಗೆ ಸೂಚಿಸಿದರು.
ತಹಸೀಲ್ದಾರ್ ವಿಠ್ಠಲ್ ಚೌಗಲಾ, ತಾಪಂ ಇಒ ದುಂಡಪ್ಪ ತುರಾದಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ, ಓಜನಳ್ಳಿ ಗ್ರಾಪಂ ಅಧ್ಯಕ್ಷ ಹುಚ್ಚಪ್ಪ ಭೋವಿ, ಪಿಡಿಒ ಶಿವಬಸಪ್ಪ ಇತರರಿದ್ದರು.