ಕೆರೆಗೆ ಜಾನುವಾರು ನುಗ್ಗಿಸಿ ಆಕ್ರೋಶ, ಬಿಎಸ್​ಪಿಎಲ್​ ಆರಂಭಕ್ಕೆ ವಿರೋಧ

district koppal bspl protest dc office
Published on

ಕೊಪ್ಪಳ: ಬಿಎಸ್​ಪಿಎಲ್​ ಆರಂಭ, ಇತರ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಪದಾಧಿಕಾರಿಗಳು ಬುಧವಾರ ನಗರದ ಜಿಲ್ಲಾಡಳಿತ ಭವನ ಮುಂದೆ ಜಾನುವಾರುಗಳೊಂದಿಗೆ ಪ್ರತಿಭಟನೆ ನಡೆಸಿದರು. ಬಳಿಕ ರೈತರು ಕಂಪನಿ ಕಬ್ಜ ಮಾಡಿಕೊಂಡಿರುವ ಕೆರೆಗೆ ಜಾನುವಾರು&ಕುರಿಗಳನ್ನು ನುಗ್ಗಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಇರುವ ಕಾರ್ಖಾನೆಗಳಿಂದ ಜನರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಇದು ಸರ್ಕಾರದ ಗಮನಕ್ಕಿದೆ. ಹೀಗಿದ್ದರೂ ಕಿಲೋರ್ಸ್ಕರ್​ ಸೇರಿ ಇತರ ಕಾರ್ಖಾನೆಗಳ ವಿಸ್ತರಣೆ ಆಗುತ್ತಿದೆ. ಸಕ್ಕರೆ ಕಾರ್ಖಾನೆ ಆಂಭಕ್ಕೆ ಅವಕಾಶ ಮಾಡಿದ್ದಾರೆ. ಬಿಎಸ್​ಪಿಎಲ್​ ರದ್ದುಪಡಿಸಿದ ಆದೇಶ ಮಾಡುತ್ತಿಲ್ಲ. ಬಸಾಪುರ ಕೆರೆ ಸಾರ್ವಜನಿಕ ಬಳಕೆಗೆ ಮುಕ್ತವಾಗಿರಬೇಕೆಂದು ನ್ಯಾಯಾಲಯ ಸೂಚಿಸಿದೆ. ಹೀಗಿದ್ದರೂ ಕಾರ್ಖಾನೆಯವರು ಸುತ್ತಲೂ ಕಾಂಪೌಂಡ್​ ಕಟ್ಟಿದ್ದಾರೆ. ಇಷ್ಟಾದರೂ ಜಿಲ್ಲಾಡಳಿತ, ಸರ್ಕಾರ ಕಾರ್ಖಾನೆಗಳ ಕೈಗೊಂಬೆಗಳಂತೆ ವರ್ತಿಸುತ್ತಿವೆ ಎಂದು ಕಿಡಿಕಾರಿದರು.

ತಕ್ಷಣ ಬಿಎಸ್​ಪಿಎಲ್​ಗೆ ನೀಡಿದ ಅನುಮತಿ ರದ್ದುಪಡಿಸಿ ಸರ್ಕಾರ ಆದೇಶಿಸಬೇಕು. ಹೊಸ ಕಾರ್ಖಾನೆಗಳ ಆರಂಭಕ್ಕೆ ಅನುಮತಿಸಬಾರದು. ಈಗಿರುವ ಕಾರ್ಖಾನೆಗಳನ್ನು ವಿಸ್ತರಿಸಲು ಅನುಮೋದಿಸಬಾರದು. ಸಿಎಂ, ಕೈಗಾರಿಕೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಕೊಪ್ಪಳಕ್ಕೆ ಬರಬೇಕು. ಹೋರಾಟಗಾರರು ಜನರ ಅಭಿಪ್ರಾಯ ಪಡೆಯಬೇಕು. ಕೈಗಾರಿಕೆ ವ್ಯಾಪ್ತಿ ಗ್ರಾಮಗಳ ಜನರ ಆರೋಗ್ಯ, ಪರಿಸರ ಬಗ್ಗೆ ಅಧ್ಯಯನ ನಡೆಸಬೇಕೆಂದು ಒತ್ತಾಯಿಸಿದರು.

ಸಾವಿರಾರು ಸಂಖ್ಯೆಯಲ್ಲಿ ರಾಸುಗಳನ್ನು ಡಿಸಿ ಕಚೇರಿಯೊಳಗೆ ನುಗ್ಗಿಸಲು ಹೋರಾಟಗಾರರು ಯತ್ನಿಸಿದರು. ಈ ವೇಳೆ ಅಡ್ಡಿಪಡಿಸಿದ ಪೊಲೀಸರು ಒಳ ಹೋಗದಂತೆ ತಡೆದರು. ಎಸಿ ಕ್ಯಾ.ಮಹೇಶ ಮಾಲಗಿತ್ತಿ ಮನವಿ ಸ್ವೀಕರಿಸಿದರು. ಪೊಲೀಸರು ದೊಣ್ಣೆ ಹಿಡಿದು ರಾಸುಗಳನ್ನು ಓಡಿಸಲು ಹರಸಾಹಸಪಟ್ಟರು.

ಹೋರಾಟಗಾರರಾದ ಅಲ್ಲಮಪ್ರಭು ಬೆಟ್ಟದೂರು, ಬಸವರಾಜ ಶೀಲವಂತರ, ಕೆ.ಬಿ.ಗೋನಾಳ, ಮಂಜುನಾಥ ಗೊಂಡಬಾಳ, ಮಂಗಳೇಶ, ಶರಣು ಗಡ್ಡಿ, ಶರಣು ಶೆಟ್ಟರ, ಗಾಳೆಪ್ಪ ಮುಂಗೋಲಿ, ಎಸ್​.ಎ.ಗಾರ್​ ಇತರರಿದ್ದರು.

ಕೆರೆಗೆ ದನ ನುಗ್ಗಿಸಿದ ರೈತರು

ಬಸಾಪುರ ಕೆರೆ ಸಾರ್ವಜನಿಕ ಬಳಕೆಗೆ ಮುಕ್ತವಾಗಿದೆ. ನ್ಯಾಯಾಲಯವೂ ಸಾರ್ವಜನಿಕ, ಜಾನುವಾರು ನೀರು ಕುಡಿಯಲು ಅಡ್ಡಿಪಡಿಸದಂತೆ ಸೂಚಿಸಿದೆ. ಹೀಗಿದ್ದರೂ ಬಿಎಸ್​ಪಿಎಲ್​ ಕಂಪನಿ ಕೆರೆ ಸುತ್ತಲೂ ತಡೆಗೋಡೆ ನಿರ್ಮಿಸಿದೆ. ಮುಖ್ಯದ್ವಾರದಲ್ಲೂ ಜನ&ಜಾನುವಾರು ಪ್ರವೇಶಕ್ಕೆ ಅನುಮತಿಸುತ್ತಿಲ್ಲ. ಹೀಗಾಗಿ ಆಕ್ರೋಶಗೊಂಡ ರೈತರು ಪ್ರತಿಭಟನೆ ಬಳಿಕ ಹೋರಾಟಗಾರರೊಂದಿಗೆ ತೆರಳಿ ಕೆರೆಗೆ ಜಾನುವಾರು ನುಗ್ಗಿಸಿದರು. ಕಂಪನಿ ಸಿಬ್ಬಂದಿ ತಡೆಯಲು ಅಡ್ಡಿಪಡಿಸಿದರೂ ಲೆಕ್ಕಿಸದೇ ಒಳ ನುಗ್ಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net