

ಕೊಪ್ಪಳ: ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡು ಬಿಎಸ್ಪಿಎಲ್ ಕಾರ್ಖಾನೆ ಆರಂಭಿಸದಂತೆ ಹಾಗೂ ನಿಯಮ ಮೀರಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಾಲವರ್ತಿ ಗ್ರಾಮಸ್ಥರು ಶುಕ್ರವಾರ ನಗರದ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಗ್ರಾಮದ ಸುತ್ತಲೂ ಈಗಾಗಲೇ ಹಲವು ಕಾರ್ಖಾನೆಗಳಿವೆ. ಅವೈಜ್ಞಾನಿಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಅಪಾರ ಧೂಳು, ವಿಷಕಾರಿ ಅನಿಲ ಹೊರಬಿಡುತ್ತಿವೆ. ಇದರಿಂದ ಜನರಲ್ಲಿ ಕ್ಷಯ, ಅಸ್ತಮಾ, ಶೀತ ಸೇರಿ ಇತರ ಅನಾರೋಗ್ಯ ಕಾಣಿಸಿಕೊಳ್ಳುತ್ತಿದೆ. ಕೃಷಿ ಬೆಳೆಗಳು ಹಾಗೂ ಮನೆಗಳ ಮೇಲೆ ಕಪು$್ಪ ಧೂಳು ಆವರಿಸುತ್ತಿದೆ. ಇಳುವರಿ ಕುಂಠಿತವಾಗಿದೆ. ಜಾನುವಾರುಗಳಿಗೂ ಉತ್ತಮ ಆಹಾರ ದೊರೆಯುತ್ತಿಲ್ಲ. ನಿಯಮ ಮೀರಿ ಕೆಲಸ ಮಾಡುವ ಕಾರ್ಖಾನೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹಲವು ಮನಿವಿ ಸಲ್ಲಿಸಿದರೂ ಕ್ರಮವಾಗಿಲ್ಲವೆಂದು ಆರೋಪಿಸಿದರು.
ಇದೀಗ ಕೊಪ್ಪಳ ಹಾಗೂ ಹಾಲವರ್ತಿ ಗ್ರಾಮಕ್ಕೆ ಹೊಂದಿಕೊಂಡು ಹೊಸದಾಗಿ ಬಿಎಸ್ಪಿಎಲ್ ಬೃಹತ್ ಕಾರ್ಖಾನೆ ನಿರ್ಮಿಸಲು ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಸಮಸ್ಯೆ ಇನ್ನಷ್ಟು ಹೆಚ್ಚಲಿದೆ. ಸರ್ಕಾರ ಹೊಸ ಕಾರ್ಖಾನೆಗೆ ಯಾವುದೇ ಅನುಮತಿ ನೀಡಬಾರದು. ಜತೆಗೆ ಈಗಿರವ ಕಾರ್ಖಾನೆಗಳಿಂದ ಅಪಾರ ಹಾನಿಯಾಗುತ್ತಿದ್ದು, ಅದನ್ನು ತಡೆಯಬೇಕು. ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿ ಧೂಳು, ವಿಷಾನಿಲ ನಿಯಂತ್ರಿಸಬೇಕು. ಈ ನಿಟ್ಟಿನಲ್ಲಿ ಕಾರ್ಖಾನೆಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿ. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.
ಎಸಿ ಕ್ಯಾ.ಮಹೇಶ ಮಾಲಗಿತ್ತಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಗ್ರಾಮಸ್ಥರಾದ ಮಾರ್ಕಂಡೇಯ ಹಿರೇಮಠ, ಗವಿಸಿದ್ದಪ್ಪ ರಡ್ಡಿ, ಮಂಜು ಕೆಂಚನಗೌಡರ್, ನಾಗರಾಜ ಅಜ್ಜಿ, ಸ್ವಾಮಿ, ಬಸವರಾಜ ಮೈನಳ್ಳಿ, ಸುರೇಶ ಕಿನ್ನಾಳ, ದುರುಗಪ್ಪ ಗೊರವರ್, ದೇವಪ್ಪ ಇತರರಿದ್ದರು.