

ಕೊಪ್ಪಳ: ಬಿಎಸ್ಪಿಎಲ್ ಕಾರ್ಖಾನೆ ಕಾಮಗಾರಿ ನಿಲ್ಲಿಸುವಂತೆ ಸಿಎಂ ಆದೇಶಿಸಿದರೂ ಅಸಡ್ಡೆ ತೋರಿದ್ದ ಜಿಲ್ಲಾಡಳಿತ ಗುರುವಾರ ಎಚ್ಚೆತ್ತು ಕಾಮಗಾರಿ ನಿಲ್ಲಿಸಿದೆ. ಈ ಬಗ್ಗೆ ವೀಕ್ಷಣೆಗೆ ತೆರಳಿದ ಹೋರಾಟಗಾರರು ಬಸಾಪುರ ಕೆರೆಗೆ ತೆರಳುವ ರಸ್ತೆಗೆ ಅಡ್ಡಲಾಗಿ ಹಾಕಿದ್ದ ಬ್ಯಾರಿಕೇಡ್ ಕಿತ್ತೆಸೆದು ಆಕ್ರೋಶ ಹೊರಹಾಕಿದರು.
ಕಾರ್ಖಾನೆ ಆರಂಭಿಸಿದಂತೆ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ ಸರ್ವ ಪಕ್ಷ ನಿಯೋಗ ಸಿಎಂಗೆ ಮನವಿ ಮಾಡಿದೆ. ಸ್ಪಂದಿಸಿದ ಸಿಎಂ, ಕೆಲಸ ನಿಲ್ಲಿಸಲು ಸೂಚಿಸಿದ್ದಾರೆ. ಇಷ್ಟಾದರೂ ಕಾರ್ಯಪ್ರವೃತ್ತರಾದ ಡಿಸಿ ನಲಿನ್ ಅತುಲ್ ಲಿಖಿತ ಆದೇಶ ಬಂದಿಲ್ಲವೆಂಬ ಅರ್ಥದಲ್ಲಿ ನಡೆದುಕೊಂಡಿದ್ದರು. ಬುಧವಾರ ಕಾರ್ಖಾನೆಯಲ್ಲಿ ಕಾಮಗಾರಿ ರಾಜಾರೋಷವಾಗಿ ನಡೆದರೂ ಅಧಿಕಾರಿಗಳು ತಮಗೆ ಸಂಬಂಧ ಇಲ್ಲವೆಂಬಂತೆ ವರ್ತಿಸಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಿತ್ತರವಾಗುತ್ತಲೇ ಎಚ್ಚೆತ್ತ ಜಿಲ್ಲಾಡಳಿತ, ಎಡಿಸಿ ಸಿದ್ರಾಮೇಶ್ವರ ಅವರ ಮೂಲಕ ಸ್ಪಷ್ಟೀಕರಣ ನೀಡಿದೆ. ಸಿಎಂ ಆದೇಶ ಮೇರೆಗೆ ಬಿಎಸ್ಪಿಎಲ್ ಕಾಮಗಾರಿ ಸ್ಥಗಿತಗೊಳಿಸಲು ಕ್ರಮ ಕೈಗೊಂಡಿದ್ದಾಗಿ ತಿಳಿಸಿದೆ.
ಆದರೂ, ಕಾಮಗಾರಿ ನಡೆಯುತ್ತಿದೆ ಎಂಬ ಅನುಮಾನ ಹಿನ್ನೆಲೆಯಲ್ಲಿ ಕೆಲ ಹೋರಾಟಗಾರರು ಕಾರ್ಖಾನೆ ಸ್ಥಳಕ್ಕೆ ತೆರಳಿದರು. ಈ ವೇಳೆ ಬಸಾಪುರ ಕೆರೆಗೆ ತೆರಳಲು ಕಾರ್ಖಾನೆಯವರು ದಾರಿ ಬಿಡಲಿಲ್ಲ. ಇದರಿಂದ ಆಕ್ರೋಶಗೊಂಡ ರಸ್ತೆಗೆ ಅಡ್ಡಲಾಗಿ ಹಾಕಿದ್ದ ಬ್ಯಾರಿಕೇಡ್ ಕಿತ್ತೆಸೆದರು. ಕಾರ್ಖಾನೆ ವಿರುದ್ಧ ಘೋಷಣೆ ಕೂಗಿದರು. ಕಂಪನಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಬಸಾಪುರ ಕೆರೆ ಸಾರ್ವಜನಿಕ ಬಳಕೆಗೆ ಮುಕ್ತವಾಗಿರಬೇಕು. ಜನ&ಜಾನುವಾರುಗಳಿಗೆ ಕುಡಿವ ನೀರು ಬಳಕೆಗೆ ಅವಕಶವಿರಬೇಕು. ಅದಕ್ಕೆ ಅಡ್ಡಿಪಡಿಸಬಾರದೆಂದು ಎಚ್ಚರಿಕೆ ನೀಡಿದರು. ಪೊಲೀಸರು ಮಧ್ಯ ಪ್ರವೇಶಿಸಿ ಶಾಂತಗೊಳಿಸಿದರು.
ಹೋರಾಟಗಾರರಾದ ಮಲ್ಲು ಪುಜಾರ, ಸಿದ್ದು ಮಣ್ಣಿನವರ, ಯಲ್ಲಪ್ಪ ಹಳೇಮನಿ, ಗವಿ ಹೂಗಾರ, ವೀರಭದ್ರಪ್ಪ, ಮೂಕಪ್ಪ ಮೇಸ್ತ್ರಿ ಇನ್ನಿತರರಿದ್ದರು.