

ಕೊಪ್ಪಳ: ರಾಜ್ಯ ಸರ್ಕಾರ ಅಭದ್ರವಾಗಿದೆ. ಸಿಎಂ, ಸಚಿವರು ಹಾಗೂ ಶಾಸಕರು ಗಾಬರಿಯಲ್ಲಿದ್ದಾರೆ. ಯಾವ ಕ್ಷಣದಲ್ಲಾದರೂ ಸರ್ಕಾರ ಬೀಳಬಹುದೆಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಭವಿಷ್ಯ ನುಡಿದರು.
ಸಿಎಂ ಸಿದ್ದರಾಮಯ್ಯ ನೆಮ್ಮದಿಯಿಂದ ನಿದ್ದೆ ಮಾಡುತ್ತಿಲ್ಲ. ಮನೆಯಿಂದ ಹೊರಗೆ ಸಣ್ಣ ಸದ್ದಾದರೂ ಕಿಟಕಿ ತೆಗೆದು ಇಣುಕಿಹಾಕುತ್ತಾರೆ. ಎಲ್ಲಿ ಇಡಿ ಅಧಿಕಾರಿಗಳು ಬಂದರೆಂದು ಹೆದರಿದ್ದಾರೆ. ಸಚಿವರು, ಶಾಸಕರೂ ಇದೇ ಹಾದಿಯಲ್ಲಿದ್ದಾರೆ. ಸಚಿವ ಜಮೀರ್ ಒಬ್ಬ 420. ಕೇಂದ್ರ ಸರ್ಕಾರ ವಕ್ಫ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದೆ. ಅದನ್ನು ಮನಗಂಡು ತರಾತುರಿಯಲ್ಲಿ ರೈತರು, ಮಠಗಳ ಆಸ್ತಿಗಳನ್ನು ವಕ್ಫ ಆಸ್ತಿಗಳೆಂದು ನೋಟಿಸ್ ಕೊಡಿಸಿದ್ದಾರೆ. ಅಹಿಂದ ಎಂದು ಹೇಳಿಕೊಳ್ಳುವ ಸಿಎಂ, ವಿನಾಶ ಕಾಲಕ್ಕೆ ವಿಪರೀತ ಬುದ್ಧಿ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ತಕ್ಷಣ ಕ್ಯಾಬಿನೆಟ್ ಸಭೆ ಕರೆದು ರದ್ದುಪಡಿಸಬೇಕಿತ್ತು. ಅದರ ಬದಲು ಮೌಖಿಕ ಆದೇಶ ನೀಡಿದ್ದಾರೆ. ರೈತರ ಶಾಪದ ಬೆಂಕಿಗೆ ಇವೆಲ್ಲ ಬೂದಿಯಾಗಲಿದ್ದಾರೆಂದು ಶುಕ್ರವಾರ ಸುದ್ದಿಗಾರರನ್ನುದ್ದೇಶಿಸಿ ಹೇಳಿದರು.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಶತಸಿದ್ಧ. ಅಧಿಸೂಚನೆ ಆಗುವ ಮುನ್ನಾ ದಿನ 1300 ಕೋಟಿ ರೂ. ಯೋಜನೆ ಘೋಷಿಸಿದ್ದಾರೆ. ಕಾರ್ಯಕರ್ತರಂತೆ ಗ್ರಾಪಂವಾರು ಪ್ರಚಾರ ನಡೆಸಿದ್ದಾರೆ. ಹಣದ ಹೊಳೆ ಹರಿಸಿದ್ದಾರೆ. ಶಾಸಕರಿಗೆ ಅನುದಾನ ನೀಡುತ್ತಿಲ್ಲ. ಇದರಿಂದ ಅಧಿಕಾರ ಕಳೆದುಕೊಳ್ಳುವ ಭಯದಲ್ಲಿ ಅವರಿದ್ದಾರೆ. ಕಾಂಗ್ರೆಸ್ ಶಾಸಕರೇ ಈ ಬಗ್ಗೆ ಬಹಿರಂಗವಾಗಿ ನೋವು ತೋಡಿಕೊಳ್ಳುತ್ತಿದ್ದಾರೆ. ಸಚಿವರಿಗೂ ಸಿಎಂ ಬದಲಾವಣೆ ಆದರೆ ತಮ್ಮ ಖಾತೆ ಎಲ್ಲಿ ಹೋಗಲಿದೆ ಎಂಬ ಚಿಂತೆ ಶುರುವಾಗಿದೆ ಎಂದು ಟೀಕಿಸಿದರು.