

ಕೊಪ್ಪಳ: ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳ ಮಾಡುವ ಮೂಲಕ ರಾಜ್ಯ ಸರ್ಕಾರ ರಾಜ್ಯದ ಜನರ ಕಿವಿಗೆ ಹೂವಿಟ್ಟು, ಕೈಗೆ ಚಿಪು$್ಪ ಕೊಟ್ಟಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು, ಕಾರ್ಯಕರ್ತರು ಮಂಗಳವಾರ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆಗಳ ಆಸೆ ಹಚ್ಚಿರುವ ಸರ್ಕಾರ ಅವರ ಜೇಬಿನಿಂದಲೇ ಹಣ ಕದ್ದು ಅವರನ್ನು ಉದ್ದಾರ ಮಾಡುತ್ತುರುವುದಾಗಿ ಹೇಳಿಕೊಳ್ಳುತ್ತಿದೆ. ಪೆಟ್ರೋಲ್ಗೆ 3ರೂ., ಡಿಸೇಲ್ಗೆ 3.50 ರೂ. ಬೆಲೆ ಹೆಚ್ಚಳ ಮಾಡಿ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಿದೆ. ಬೆಲೆ ಏರಿಕೆ ಖಂಡಿಸಿ ತಲೆ ಮೇಲೆ ಗಾಡಿ ಹೊತ್ತು ಪ್ರತಿಭಟಿಸಿದವರು ಅಧಿಕಾರಕ್ಕೆ ಬಂದ ವರ್ಷದಲ್ಲೇ ಇಂಧನ ದರ ಹೆಚ್ಚಿಸಿದ್ದಾರೆ. ಇದಕ್ಕೆ ಗ್ಯಾರಂಟಿ ಯೋಜನೆಗಳ ಸಮರ್ಥನೆ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಜನರ ದುಡ್ಡು ಕಸಿದುಕೊಂಡು ಅವರಿಗೆ ಗ್ಯಾರಂಟಿ ನೀಡುತ್ತಿದ್ದು, ಅದನ್ನು ತಮ್ಮ ಪಕ್ಷದ ಕಾರ್ಯಕ್ರಮವೆಂದು ಬಿಂಬಿಸಿಕೊಳ್ಳುತ್ತಿರುವುದು ಸರಿಯಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಕಿವಿಯಲ್ಲಿ ಹೂವಿಟ್ಟುಕೊಂಡು, ಕೈಯಲ್ಲಿ ಚಿಪು$್ಪ ಹಿಡಿದು ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಚಿಪು$್ಪಕೊಟ್ಟಿದ್ದಾರೆಂದು ಲೇವಡಿ ಮಾಡಿದರು. ಎತ್ತಿನ ಬಂಡಿ ಏರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗಿದರು.
ಈಗಾಗಲೇ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ಕುಂಠತವಾಗಿದೆ. ಅಭಿವೃಧಿ ಕಾಮಗಾರಿಗಳಿಗೆ ಅನುದಾನ ನೀಡುತ್ತಿಲ್ಲ. ಇದೀಗ ಇಂಧನ ದರ ಏರಿಕೆ ಮಾಡಿದ್ದು, ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ತಕ್ಷಣ ದರ ಇಳಿಕೆ ಮಾಡಬೇಕು. ತಮ್ಮ ಹೆಸರಿಗಾಗಿ ಜನರ ಮೇಲೆ ಭಾರ ಹಾಕುವುದನ್ನು ಕೈ ಬಿಡಬೇಕು. ಇಲ್ಲದಿದ್ದಲ್ಲಿ ರಾಜ್ಯದ ಜನರು ತಕ್ಕ ಪಾಠ ಕಲಿಸುವರೆಂದು ಎಚ್ಚರಿಸಿದರು.
ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಶಾಸಕ ಗಾಲಿ ಜನಾರ್ದನ ರೆಡ್ಡಿ, ವಿಪ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೇಸುಗೂರು, ಪ್ರಮುಖರಾದ ಡಾ.ಕೆ.ಬಸವರಾಜ, ಮಹಾಂತೇಶ ಪಾಟೀಲ್ ಮೈನಳ್ಳಿ, ಮಧುರಾ ಕರ್ಣಂ, ನಾಗರತ್ನ ಪಾಟೀಲ್ ಇತರರಿದ್ದರು.