

ಕೊಪ್ಪಳ: ರೈತರ ಪಹಣಿಯಲ್ಲಿ ವಕ್ಫ್ ಹೆಸರು ನಮೂದಿಸಿ ಸಮಸ್ಯೆ ಮಾಡಿರುವ ಸರ್ಕಾರದ ಕ್ರಮ ಖಂಡಿಸಿ ನ.22ರಂದು ಡಿಸಿ ಕಚೇರಿ ಮುಂಭಾಗದಲ್ಲಿ ಹೋರಾಟ ನಡೆಸಲಾಗುವುದೆಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ ತಿಳಿಸಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ವಕ್ಫ್ ಹೆಸರಿನಲ್ಲಿ ಸರ್ಕಾರ ರೈತರನ್ನು ನಿರ್ನಾಮ ಮಾಡತ್ತಿದೆ. ಈ ಬಗ್ಗೆ ನಾವು ಮೊದಲಿನಿಂದಲೂ ಹೋರಾಟ ಮಾಡುತ್ತಿದ್ದೇವೆ. ನೂರಾರು ವರ್ಷಗಳಿಂದ ಉಳುಮೆ ಮಾಡುತ್ತಿರುವ ಜಮೀನುಗಳು ವಕ್ಫ್ ಆಸ್ತಿ ಎಂದು ಬೋರ್ಡ್ ಹೇಳುತ್ತಿದೆ. ರೈತರ ಗಮನಕ್ಕೆ ತರದೇ ನೋಟಿಸ್ ನೀಡದೆ ಏಕಾಏಕಿ ಪಹಣಿಯಲ್ಲಿ ವಕ್ಫ್ ಹೆಸರು ನಮೂದಿಸುತ್ತಿದ್ದಾರೆ. ಇದರಿಂದ ರೈತರಿಗೆ ಸಾಲ ಸೌಲಭ್ಯ, ಮಾರಾಟ, ಇತರ ವ್ಯವಹಾರ ನಡೆಸಲು ತೊಂದರೆಯಾಗಿದೆ. ಇದನ್ನು ತಾರ್ಕಿಕ ಅಂತ್ಯ ಕಾಣಿಸಲು ನಮ್ಮ ಪಕ್ಷ ನಿರ್ಧರಿಸಿದೆ. ಇದಕ್ಕಾಗಿ ರೈತರಿಗೆ ಸಹಾಯವಾಣಿ ಆರಂಭಿಸಿದ್ದೇವೆ. ನಮ್ಮ ಜಿಲ್ಲೆಯಲ್ಲಿ 50&60 ರೈತರಿಗೆ ಈ ರೀತಿಯಾಗಿದೆ ಎಂದರು.
ಇದನ್ನು ಖಂಡಿಸಿ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ. ಕೊಪ್ಪಳದಲ್ಲಿ ನ.22ರಂದು ಪ್ರತಿಭಟನೆ ಇದೆ. ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ, ಪರಿಷತ್ ಪ್ರತಿಪಕ್ಷ ನಾಯಲಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ತಂಡಗಳು ಪ್ರವಾಸ ನಡೆಸಿ ರೈತರ ಸಮಸ್ಯೆ ಆಲಿಸಲಿವೆ. ನೂರಾರು ರೈತರು ಭಾಗಿಯಾಗಲಿದ್ದು, ಅವರಿಗೆ ವಕ್ಫ್ ಕಾಯ್ದೆ, ಅದರಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು. ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಪ್ರಸಾದ ಗಾಳಿ ಇದ್ದರು.