

ಕೊಪ್ಪಳ: ಮಾಜಿ ಕರ ಸೇವಕ ಶ್ರೀಕಾಂತ ಪೂಜಾರಿ ಬಂಧನ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದು ವಿರೋಧಿ ನೀತಿ ಅನುಸರಿಸುತ್ತಿದೆ. ಒಂದು ಕೋಮಿನ ಜನರ ಓಲೈಕೆ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ನಗರದ ಡಿಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಈ ಸಮಯದಲ್ಲಿ ಹಳೇ ಪ್ರಕರಣಗಳಿಗೆ ಮರು ಜನ್ಮ ನೀಡಲಾಗಿದೆ. ಪೊಲೀಸರ ಮೇಲೆ ಒತ್ತಡ ಹೇರಿ ಕರ ಸೇವಕರಾಗಿ ಸೇವೆ ಸಲ್ಲಿಸಿದ್ದ ಶ್ರೀಕಾಂತ ಪೂಜಾರಿ ಬಂಧನ ಮಾಡಲಾಗಿದೆ.
ಇದೊಂದು ವ್ಯವಸ್ಥಿತ ಪಿತೂರಿ. ಹಿಂದುಪರ ಹೋರಾಟಗಳನ್ನು, ಕಾರ್ಯಕರ್ತರನ್ನು ಹತ್ತಿಕ್ಕುವ ತಂತ್ರ. ಧರ್ಮ ಕಾರ್ಯಗಳಿಗೆ ಮುಂದಾಗಲು ಯುವಕರು ಹಿಂಜರಿಯಬೇಕೆಂಬ ಉದ್ದೇಶದಿಂದ 31 ವರ್ಷದ ಬಳಿಕ ಬಂಧನ ಮಾಡಿಸಿದ್ದಾರೆಂದು ಆರೋಪಿಸಿದರು.
ದೇಶದೆಲ್ಲೆಡೆ ಶ್ರೀರಾಮ ಮಂದಿರದ ಉದ್ಘಾಟನಾ ಕಾರ್ಯದ ಸಂಭ್ರಮ ಮನೆ ಮಾಡಿದೆ. ರಾಜ್ಯದಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡುವ ಮೂಲಕ ಅದರ ಮಹತ್ವ ಕುಗ್ಗಿಸಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಕೇವಲ ಒಂದು ಕೋಮಿನ ಓಲೈಕೆ ಮಾಡುತ್ತಿದ್ದಾರೆ.
ತುಷ್ಟೀಕರಣ ನೀತಿಯಿಂದ ಹಿಂದುಗಳಿಗೆ ಅನ್ಯಾಯ ಎಸಗುತ್ತಿದ್ದಾರೆ. ತಕ್ಷಣ ಇಂಥ ಚಟುವಟಿಕೆಗಳು ನಿಲ್ಲಬೇಕು. ಶ್ರೀಕಾಂತ ಪೂಜಾರಿ ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕ ಬಸವರಾಜ ದಢೇಸುಗೂರು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹರಾವ್ ಕುಲಕರ್ಣ, ಜಿಲ್ಲಾ ವಕ್ತಾರ ಮಹೇಶ ಅಂಗಡಿ, ಯಲಬುರ್ಗಾ ಅಧ್ಯಕ್ಷ ವಿಶ್ವನಾಥ್ ಮರಿಬಸಪ್ಪ, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್,
ಗಂಗಾವತಿ ನಗರ ಅಧ್ಯಕ್ಷ ಕಾಶಿನಾಥ್ ಚಿತ್ರಗಾರ, ರಾಜ್ಯ ಮಹಿಳಾ ಕಾರ್ಯದರ್ಶಿ ಶೋಭಾನಗರಿ, ಮಂಜುಳಾ ಕರಡಿ, ಮಹಾಲಕ್ಷಿ$್ಮ ಕಂದಾರಿ, ಮಹಾಂತೇಶ ಮೈನಳ್ಳಿ, ಬಸವರಾಜ ಗೌರಾ, ರಾಜೇಂದ್ರ ಶೆಟ್ಟರ್, ಶಿವುಕುಮಾರ್ ಅರಿಕೇರಿ ಇತರರಿದ್ದರು.