

ಕೊಪ್ಪಳ: ಎಸ್ಟಿ ನಿಗಮದಲ್ಲಿ 187 ಕೋಟಿ ರೂ. ಅವ್ಯವಹಾರ ನಡೆದಿದ್ದು, ಹಣಕಾಸು ಇಲಾಖೆ ಹೊಣೆ ಹೊತ್ತ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ವಿಪ ಸದಸ್ಯೆ ಹೇಮಲತಾ ನಾಯಕ ಒತ್ತಾಯಿಸಿದರು.
ಅಹಿಂದ ವರ್ಗದ ನಾಯಕನೆಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಪರಿಶಿಷ್ಟ ಜಾರಿ ಜನರ ಕಲ್ಯಾಣಕ್ಕಾಗಿ ಇದ್ದ ಹಣ ದುರ್ಬಳಕೆ ಆದರೂ ಸುಮ್ಮನಿದ್ದಾರೆ. ಅಷ್ಟೊಂದು ದೊಡ್ಡ ಅವ್ಯವಹಾರ ನಡೆದಿದ್ದು, ಹಣಕಾಸು ಇಲಾಖೆ ಗಮನಕ್ಕೆ ಇರುವುದಿಲ್ಲವಾ ? ಕೇವಲ ಬಿ.ನಾಗೇಂದ್ರ ರಾಜೀನಾಮೆ ಪಡೆದರೆ ಮುಗಿಯುವುದಿಲ್ಲ. ತನಿಖೆ ಚುರುಕಾಗಬೇಕು. ಅಷ್ಟೊಂದು ದೊಡ್ಡ ಮೊತ್ತ ವರ್ಗಾವಣೆ ಆದರೂ ಸಿದ್ದರಾಮಯ್ಯ ಸಿಮ್ಮನೆ ಯಾಕಿದ್ದರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಹಣವನ್ನು ಯಾವುದೇ ಯೋಜನೆಗಳಿಗೆ ಖರ್ಚು ಮಾಡಿಲ್ಲ. ಬದಲಿಗೆ ಬೇನಾಮಿ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಮಾರ್ಚ್ ತಿಂಗಳಲ್ಲಿ ಅವ್ಯವಹಾರ ನಡೆದಿದೆ. ಹೀಗಿದ್ದರೂ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡು ಡೆತ್ ನೋಟ್ ಬೆಳಕಿಗೆ ಬರುವ ತನಕ ಯಾವೊಬ್ಬ ಅಧಿಕಾರಿ, ಜನಪ್ರತಿನಿಧಿ ಬಾಯಿ ಬಿಡಲಿಲ್ಲ ಯಾಕೆಂಬ ಅನುಮಾನ ಕಾಡುತ್ತಿದೆ. ಇದನ್ನು ಖಂಡಿಸಿ ಜೂ.28ರಂದು ಎಲ್ಲ ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು. ಗಣೇಶ ಹೊರತಟ್ನಾಳ, ಸುರೇಶ ಡೊಣ್ಣಿ, ಮಹೇಶ ಹಾದಿಮನಿ ಇತರರಿದ್ದರು.