

ಕೊಪ್ಪಳ: ರಾಜ್ಯ ಸರ್ಕಾರ ಏಕಾಏಕಿ ಇಂಧನ ದರ ಏರಿಕೆ ಮಾಡಿದ್ದು, ಇದನ್ನು ಖಂಡಿಸಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರವಾರು ಇಂದು (ಜೂ.20) ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ ಹೇಳಿದರು.
ಗ್ಯಾರಂಟಿ ಯೋಜನೆ ಹೆಸರಿನಲ್ಲಿ ರಾಜ್ಯ ಸರ್ಕಾರ ಜನರ ಮೇಲೆ ಭಾರ ಹೊರಿಸುತ್ತಿದೆ. ಈಗಾಗಲೇ ವಿವಿಧ ತೆರಿಗೆಗಳನ್ನು ಹೆಚ್ಚಿಸಲಾಗಿದೆ. ಇದೀಗ ಪೆಟ್ರೋಲ್, ಡಿಸೇಲ್ ಬೆಲೆ ಏಕಾಏಕಿ ಏರಿಸಿ ಜನರ ಜೇಬಿಗೆ ಕತ್ತರಿ ಹಾಕಿದೆ. ಸರ್ಕಾರಿ ಜಾಗಗಳ ಮಾರಾಟಕ್ಕೆ ಚಿಂತನೆ ನಡೆಸಿದೆ. ಈ ಮೂಲಕ ರಾಜ್ಯ ಮಾರಾಟ ಮಾಡಲು ಹೊರಟಿದೆ. ಇದು ಜನರಿಗೆ ಮಾಡುವ ಮೋಸ. ತಕ್ಷಣ ಸರ್ಕಾರ ತನ್ನ ನಡೆ ಬದಲಿಸಬೇಕು. ಜನರ ಮೇಲೆ ತೆರಿಗೆ ಭಾರ ಹೇರಿಕೆ ನಿಲ್ಲಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಈಗಾಗಲೇ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದೇವೆ. ವಿಧಾನಸಭಾವಾರು ಹೋರಾಟ ನಡೆಯಲಿದೆ. ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು. ಜಿಲ್ಲೆಯಲ್ಲೂ ಕಳ್ಳತನ ಹೆಚ್ಚಿದ್ದು, ಜನರಿಗೆ ರಕ್ಷಣೆ ಇಲ್ಲದಂತಾಗಿದೆ. ಪೊಲೀಸ್ ಇಲಾಖೆ ವಿಲವಾಗಿದೆ. ಜನರು ಪರದಾಡುವಂತಾಗಿದೆ ಎಂದು ಆರೋಪಿಸಿದರು.
ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ, ಮಾಧ್ಯಮ ಪ್ರಮುಖರಾದ ಪ್ರಸಾದ ಗಾಳಿ, ಮಹೇಶ ಹಾದಿಮನಿ ಇದ್ದರು.