ಕೊಪ್ಪಳದಲ್ಲಿ ಜನಾಕ್ರೋಶ ಯಾತ್ರೆ ಏ.22ಕ್ಕೆ

district koppal bjp janakrosha yatra visit mlc naveen
Published on

ಕೊಪ್ಪಳ: ಬೆಲೆ ಏರಿಕೆ ಹಾಗೂ ರಾಜ್ಯ ಸರ್ಕಾರದ ದುರಾಡಳಿತ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಹಮ್ಮಿಕೊಂಡಿರುವ ಜನಾಕ್ರೋಶ ಯಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ. ಕೊಪ್ಪಳದಲ್ಲಿ ಏ.22ರಂದು ಯಾತ್ರೆ ನಡೆಯಲಿದೆ ಎಂದು ವಿಪ ಸದಸ್ಯ ಕೆ.ಎಸ್​.ನವೀನ್​ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಜನ ಸಾಮಾನ್ಯರ ನೋವುಗಳನ್ನು ಸರ್ಕಾರದ ಮುಂದಿಡುವ ಕೆಲಸ ಮಾಡುತ್ತಿದ್ದೇವೆ. ಏ.22ರಂದು ಸಂಜೆ ನಾಲ್ಕು ಗಂಟೆಗೆ ಕೊಪ್ಪಳಕ್ಕೆ ಯಾತ್ರೆ ಆಗಮಿಸಲಿದೆ. ಪಕ್ಷದ ಜಿಲ್ಲಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್​.ಅಶೋಕ, ಪರಿಷತ್​ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಗೋವಿಂದ ಕಾರಜೋಳ ಸೇರಿ ಇತರ ರಾಜ್ಯ ನಾಯಕರು ಭಾಗಿಯಾಗುವರು. ಪಕ್ಷದ ಎಲ್ಲ ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು, ಸಾರ್ವಜನಿಕರು ಆಗಮಿಸುವರು. ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದರು.

ಸರ್ಕಾರ ನಿರಂತರ ಬೆಲೆ ಏರಿಕೆ ಬರೆ ಎಳೆಯುತ್ತಿದೆ. ಜನರು ಬದುಕು ಸಾಗಿಸುವುದು ದುಸ್ತರವಾಗಿದೆ. ಕರ್ನಾಟಕ ದೇಶದ ದುಬಾರಿ ರಾಜ್ಯ. ಶೇ.5.40ರಷ್ಟು ಹಣದುಬ್ಬರ ಇದೆ. ದೇಶದ ಪ್ರಮುಖ 10 ನಗರಗಳಲ್ಲಿ ಬೆಂಗಳೂರು ಒಂದಾಗಿದೆ. ಮಹಿಳೆಯರಿಗೆ ರಕ್ಷಣೆ ಇಲ್ಲ. ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್​ ಬರ್ತಿಲ್ಲ. ಎಸ್ಸಿ&ಎಸ್ಟಿ ಹಣ ದುರ್ಬಳಕೆ ಆಗುತ್ತಿದೆ. ಈ ಬಗ್ಗೆ ದಾಖಲೆ ನೀಡಿದರೂ ಸಿಎಂ ಉತ್ತರ ನೀಡಲಿಲ್ಲ. ಬಜೆಟ್​ ಅಧಿವೇಶನದಲ್ಲಿ ಕೇವಲ ಒಂದು ದಿನ ಮಾತ್ರ ಬಜೆಟ್​ ಮೇಲೆ ಚರ್ಚೆ ನಡೆದಿದೆ. ಸಿಎಂ ಸಮಜಾಯಿಷಿ ನೀಡಲಿಲ್ಲ. ಸರ್ಕಾರ 2.5ಲಕ್ಷ ಕೋಟಿ ರೂ. ಸಾಲ ಮಾಡಿದೆ ಎಂದು ಆರೋಪಿಸಿದರು.

ವಿರೋಧ ಪಕ್ಷವಾಗಿ ನಮ್ಮಕೆಲಸ ನಾವು ಮಾಡುತ್ತಿದ್ದೇವೆ. ಸಾರ್ವಜನಿಕರು ಸ್ವಯಂ ಭಾಗಿಯಾಗುತ್ತಿದ್ದಾರೆ. ಇದರಿಂದ ಆಗುವ ಡ್ಯಾಮೇಜ್​ ಕಂಟ್ರೋಲ್​ ಮಾಡಲು ಜಾತಿ ಗಣತಿ ವರದಿ ಅಸ್ತ್ರವಾಗಿ ಬಳಸುತ್ತಿದ್ದಾರೆ. ಅಧಿಕಾರದಲ್ಲಿದ್ದವರಿಗೆ ಈ ನಡೆ ಶೋಭೆ ತರುವಂತದ್ದಲ್ಲ. ಪ್ರತಿಭಟನೆಯಲ್ಲಿ ಜನರು ಸ್ವಯಂ ಪ್ರೇರಿತರಾಗಿ ಭಾಗಿಯಾಗುತ್ತಿದ್ದಾರೆ. ಕೊಪ್ಪಳದಲ್ಲಿ 10 ಸಾವಿರ ಜನ ಸೇರುವರು. ನಗರದ ಅಶೋಕ ವೃತ್ತದಿಂದ ಬಸವೇಶ್ವರ ವೃತ್ತವರೆಗೆ ಯಾತ್ರೆ ಸಾಗಲಿದೆ ಎಂದು ಮಾಹಿತಿ ನೀಡಿದರು.

ವಿಪ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗೂರು, ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್​, ಚಂದ್ರು ಕವಲೂರು, ಮಹಾಂತೇಶ ಮೈನಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net