ಕೊಪ್ಪಳ: ರಾಜ್ಯ ಸರ್ಕಾರ ತನ್ನ ಹಗರಣಗಳನ್ನು ಮುಚ್ಚಿಕೊಳ್ಳಲು ಹೆಣಗುತ್ತಿದೆ. ಗ್ಯಾರಂಟಿ ಯೋಜನೆ ನೀಗಿಸಲಾಗದೆ ಅವೈಜ್ಞಾನಿಕ ಮಾನದಂಡ ಆಧರಿಸಿ ಬಿಪಿಎಲ್ ಕಾರ್ಡ್ ರದ್ಧತಿಗೆ ಮುಂದಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್ ಆರೋಪಿಸಿದ್ದಾರೆ.
ಗ್ಯಾರಂಟಿ ಆಸೆ ತೋರಿಸಿ ಜನರ ದಾರಿ ತಪ್ಪಿಸಿ ಅಧಿಕಾರಕ್ಕೆ ಬಂದಿದೆ. ಜನರ ಉದ್ಧಾರದ ಹೆಸರಲ್ಲಿ ಸಾಲು ಸಾಲು ಹಗರಣ ಮಾಡಿದೆ. ಅಧಿಕಾರದ ಆಸೆಗೆ ಗ್ಯಾರಂಟಿ ಜಾರಿ ಮಾಡಿ, ನಿಭಾಯಿಸಲಾಗದೆ ಹೆಣಗಾಡುತ್ತಿದೆ. ಭ್ರಷ್ಟಾಚಾರದಲ್ಲಿ ಮುಳುಗಿ ಬೊಕ್ಕಸ ಬರಿದು ಮಾಡಿಕೊಂಡಿದೆ. ಇದೀಗ 11 ಲಕ್ಷ ಬಿಪಿಎಲ್ ಪಡಿತರ ಚೀಟಿಗಳನ್ನು ಅವೈಜ್ಞಾನಿಕ ಮಾನದಂಡದಡಿ ರದ್ದು ಮಾಡಲು ಮುಂದಾಗಿದೆ. ಸಿಎಂ ಸಿದ್ದರಾಮಯ್ಯ ಮಹಾರಾಷ್ಟ್ರ ಚುನಾವಣೆ ಪ್ರಚಾರದಲ್ಲಿ ಗ್ಯಾರಂಟಿ ನೀಡಿದ್ದಾಗಿ ಹೇಳಿದ್ದಾರೆ. ಅಲ್ಲಿಂದ ವಾಪಸ್ ಬರುತ್ತಲೇ ಕಾರ್ಡ್ ರದ್ದತಿಗೆ ಮುಂದಾಗಿದ್ದಾರೆ. ಈ ಮೂಲಕ ತಮ್ಮ ಕುತಂತ್ರ ಬಯಲು ಮಾಡಿದ್ದಾರೆ. ನೈಜ ಲಾನುಭವಿಗಳ ಹಕ್ಕು ಕಸಿಯಲು ಮುಂದಾಗಿದ್ದನ್ನು ನಮ್ಮ ಪಕ್ಷ ಖಂಡಿಸಲಿದೆ.
ಆರಂಭದಲ್ಲಿ ಎಲ್ಲರಿಗೂ ಫ್ರೀ ಎಂದವರು. ದಿನ ಕಳೆದಂತೆ ಇಲ್ಲ ಸಲ್ಲದ ಷರತ್ತು ವಿಧಿಸುತ್ತಿದ್ದಾರೆ. ಅನ್ನಭಾಗ್ಯದ ಭಾರ ಹೊರಲಾರದೆ ಬಡವರ ಕಾರ್ಡ್ ರದ್ದು ಮಾಡುವುದು ಸರಿಯಲ್ಲ. ತೆರಿಗೆದಾರರು, ಸರ್ಕಾರಿ ಕುಟುಂಬ ಎಂದೆಲ್ಲ ನೆಪ ಹೇಳುತ್ತಿದ್ದಾರೆ. ಬಾಕಿ ಯೋಜನೆಗಳಲ್ಲಿ ಎಲ್ಲರಿಗೂ ಸೌಲಭ್ಯ ಸಿಗುತ್ತಿದೆ. ಇದರಲ್ಲಿ ಬೇಡವೆನ್ನುವುದು ಯಾಕೆ ? ಸರ್ಕಾರದ ಈ ನಡೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಮುನ್ಸೂಚನೆಯಾ ? ಈ ಸರ್ಕಾರಕ್ಕೆ ದೂರದೃಷ್ಟಿ, ಪೂರ್ವಸಿದ್ಧತೆ ಇಲ್ಲ. ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದೆ. ಗ್ಯಾರಂಟಿ ಯೋಜನೆಗಳು ಈಗ ನುಂಗಲಾರದ ತುತ್ತಾಗಿ ಪರಿಣಮಿಸಿವೆ. ಕೂಡಲೇ ಸರ್ಕಾರ ಅರ್ಹರನ್ನು ಯೋಜನೆಯಿಂದ ಹೊರಗಿಡುವ ನಿರ್ಧಾರ ಕೈ ಬಿಡಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಮಾಡಲಾಗುವುದೆಂದು ತಿಳಿಸಿದ್ದಾರೆ.