ದಢೇಸುಗೂರುಗೆ ಬಿಜೆಪಿ ಜಿಲ್ಲಾಧ್ಯಕ್ಷ ಪಟ್ಟ

district koppal bjp district president basavaraj dadesgooru
Published on

ಕೊಪ್ಪಳ: ಕಮಲ ಪಾಳಯಕ್ಕೆ ನೂತನ ಜಿಲ್ಲಾ ಸಾರಥಿಯಾಗಿ ಮಾಜಿ ಶಾಸಕ ಬಸವರಾಜ ದಢೇಸುಗೂರು ಆಯ್ಕೆಯಾಗಿದ್ದು, ಬುಧವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ವಿಪ ಸದಸ್ಯ ಹನುಮಂತ ನಿರಾಣಿ ಘೋಷಿಸಿದರು.

ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಚುಕ್ಕಾಣಿ ಸಂಬಂಧ ಒಳಜಗಳಗಳು ಶುರುವಾಗಿವೆ. ಕಳೆದೊಂದು ವರ್ಷದ ಹಿಂದೆ ನವೀನ ಗುಳಗಣ್ಣವರಗೆ ಜಿಲ್ಲಾಧ್ಯಕ್ಷ ಹುದ್ದೆ ಒಲಿದಿತ್ತು. ಪಕ್ಷದ ನಿಯಮದಂತೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿದ್ದು, ಸಾಮಾಜಿಕ ನ್ಯಾಯ, ಯುವ ನಾಯಕತ್ವ, ಪ್ರದೇಶವಾರು ಆದ್ಯತೆ ಮಾನದಂಡದಡಿ ಬಸವರಾಜಗೆ ಪಟ್ಟ ಕಟ್ಟಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ವರ್ಷದ ಹಿಂದೆಯೂ ಅಧ್ಯಕ್ಷರ ಆಯ್ಕೆ ವೇಳೆ ದಢೇಸುಗೂರು ಅಧ್ಯಕ್ಷಗಿರಿಗೆ ಪೈಪೋಟಿ ನಡೆಸಿದ್ದರು. ಕೊನೆ ಹಂತದಲ್ಲಿ ಕೈ ತಪ್ಪಿದ್ದರಿಂದ ಸುಮ್ಮನಾಗಿದ್ದರು.

ಇದೀಗ ತಮಗೆ ನೀಡುವಂತೆ ಪಟ್ಟು ಹಿಡಿದು, ಎಲ್ಲರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಪಕ್ಷ ಸಂಟನೆ ವಿಶ್ವಾಸದಲ್ಲಿದ್ದಾರೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಪಕ್ಷ ಕಟ್ಟುವ ಸಂಕಲ್ಪ ಮಾಡಿದ್ದು, ವರಿಷ್ಠರ ಸೂಚನೆ ಪಾಲಿಸುವುದಾಗಿ ಭರವಸೆ ನೀಡಿದ್ದಾರೆ. ಜಿಲ್ಲಾಧ್ಯಕ್ಷರ ಘೋಷಣೆ ಬಳಿಕ ವಿಜಯವಾಣಿಯೊಂದಿಗೆ ಮಾತನಾಡಿದ ಬಸವರಾಜ ದಢೇಸುಗೂರು, ಪಕ್ಷ ನನ್ನನ್ನು ಗುರುತಿಸಿ ಜಿಲ್ಲಾಧ್ಯಕ್ಷ ಜವಾಬ್ದಾರಿ ನೀಡಿದೆ. ಹಿರಿಯರು, ಕಿರಿಯರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಟನೆ ಮಾಡುವೆ ಎಂದರು.

ಜಿಲ್ಲಾಧ್ಯಕ್ಷ ಚುನಾವಣೆ ಅಧಿಕಾರಿಯಾದ ವಿಪ ಸದಸ್ಯ ಹನುಮಂತ ನಿರಾಣಿ ಎಲ್ಲರ ಸಮಕ್ಷಮದಲ್ಲಿ ಪಕ್ಷದ ನಿರ್ದೇಶನದಂತೆ ಬಸವರಾಜ ದಢೇಸುಗೂರು ಅವರನ್ನು ಜಿಲ್ಲಾಧ್ಯಕ್ಷರೆಂದು ಘೋಷಿಸಿದರು.

ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್​, ವಿಪ ಸದಸ್ಯೆ ಹೇಮಲತಾ ನಾಯಕ, ಮಾಜಿ ಅಧ್ಯಕ್ಷ ನವೀನ ಗುಳಗಣ್ಣವರ, ರಾಜ್ಯ ಕಾರ್ಯಕಾರಣಿ ಸದಸ್ಯ ಬಸವರಾಜ ಕ್ಯಾವಟರ್​, ಮಾಜಿ ಸಚಿವ ಹಾಲಪ್ಪ ಆಚಾರ್​, ಮಾಜಿ ಸಂಸದ ಶಿವರಾಮೆಗೌಡ, ಮಾಜಿ ಶಾಸಕರಾದ ಜಿ.ವೀರಪ್ಪ, ಪರಣ್ಣ ಮುನವಳ್ಳಿ, ಪ್ರಮುಖರಾದ ಗಿರೇಗೌಡ, ಚಂದ್ರು ಹಲಗೇರಿ, ವಿರೂಪಾಕ್ಷಪ್ಪ ಸಿಂಗನಾಳ, ಕೆ.ಮಹೇಶ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net