ಕಾಂಗ್ರೆಸ್​ ಪ್ರಧಾನಿ ಅಭ್ಯರ್ಥಿ ಯಾರು ? ಮಾಜಿ ಸಿಎಂ ಬಿಎಸ್​ವೈ ಪ್ರಶ್ನೆ

BJP campaign program in koppal ex cm bsy participated
ಕೊಪ್ಪಳದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಶ್ರೀರಾಮ ಹಾಗೂ ಆಂಜನೇಯ ಮೂರ್ತಿಗೆ ಅಭಿಷೇಕ ಮಾಡುವ ಮೂಲಕ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಉದ್ಘಾಟಿಸಿದರು. ಮಾಜಿ ಸಚಿವರಾದ ಸಿ.ಟಿ.ರವಿ, ಮುರುಗೇಶ ನಿರಾಣಿ, ಬೈರತಿ ಬಸವರಾಜ, ಬಿ.ಶ್ರೀರಾಮುಲು, ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್​, ಜೆಡಿಎಸ್​ ರಾಜ್ಯ ಕೋರ್​ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ, ಮಾಜಿ ಸಚಿವರಾದ ವೆಂಕಟರಾವ ನಾಡಗೌಡ, ಹಾಲಪ್ಪ ಆಚಾರ್​ ಇದ್ದರು.
Published on

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ವಿಶ್ವ ಮೆಚ್ಚಿದ ನಾಯಕ. ಕಾಂಗ್ರೆಸ್​ನಲ್ಲಿ ಪ್ರಧಾನಿ ಅಭ್ಯರ್ಥಿ ಯಾರೆಂಬುದೇ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಪ್ರಶ್ನಿಸಿದರು.

ನಗರದ ಸಾರ್ವಜನಿಕ ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ದೇಶದ ಜನರ 500 ವರ್ಷದ ಕನಸು ನನಸಾಗಿದೆ. ನಮ್ಮ ಹಿರಿಯರ ಕನಸನ್ನು ಪ್ರಧಾನಿ ಮೋದಿ ನನಸು ಮಾಡಿದ್ದಾರೆ. ಅವರ ನಾಯಕತ್ವವನ್ನು ವಿಶ್ವವೇ ಮೆಚ್ಚಿದೆ. ಕಾಂಗ್ರೆಸ್ಸಿಗರು ಪ್ರಾಣಿಕರಾಗಿದ್ದರೆ ಅವರನ್ನು ಒಮ್ಮತದಿಂದ ಆಯ್ಕೆ ಮಾಡುತ್ತಿದ್ದರು. ಹಣ, ಅಧಿಕಾರ, ಜಾತಿ ವಿಷ ಬೀಜ ಬಿತ್ತಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ನಿಮ್ಮ ಪ್ರಧಾನಿ ಅಭ್ಯರ್ಥಿ ಯಾರೆಂಬುದೇ ನಿಮಗೆ ಗೊತ್ತಿಲ್ಲ. 10 ವರ್ಷದಲ್ಲಿ ಮೋದಿ ಒಂದು ದಿನವೂ ವಿಶ್ರಮಿಸಿಲ್ಲ. ರಾಜ್ಯಾದ್ಯಂತ ಎಲ್ಲೆ ಹೋದರೂ ಬಿಜೆಪಿ, ಮೋದಿ ಹೆಸರು ಕೇಳಿಬರುತ್ತಿದೆ. ಮಾಜಿ ಪ್ರಧಾನಿ ದೇವೇಗೌಡರು ನಮ್ಮೊಂದಿಗೆ ಕೈ ಜೋಡಿಸಿದ್ದಾರೆ. ಕೊಪ್ಪಳದಲ್ಲಿ ಬಸವರಾಜನನ್ನು ಗೆಲ್ಲಿಸಿ. ಕ್ಷೇತ್ರ ಅಭಿವೃದ್ಧಿ ಮಾಡುತ್ತೇವೆ. ನಾನೂ ನಿಮ್ಮೊಂದಿಗಿದ್ದೇನೆ. ಕೊಪ್ಪಳವನ್ನು ಮಾದರಿ ಕ್ಷೇತ್ರ ಮಾಡೋಣ ಎಂದರು.

ಮಾಜಿ ಸಚಿವ ಸಿ.ಟಿ.ರವಿ ಮಾತನಾಡಿ, ಕಾಂಗ್ರೆಸ್​ನಲ್ಲಿ ಭಾರತ್​ ಮಾತಾ ಕಿ ಜೈ ಎನ್ನಲು ಅನುಮತಿ ಪಡೆಯುವ ದುರ್ಗತಿ ಇದೆ. ಆದರೆ, ಪಾಕಿಸ್ತಾನಕ್ಕೆ ಜೈಕಾರ ಹಾಕಲು ಅನುಮತಿ ಬೇಕಿಲ್ಲ. ಕರಡಿ ಸಂಗಣ್ಣ ಪೂಜಾರಿ ಇದ್ದಂತೆ. ನಾವು ದೇವರನ್ನು ನೋಡಲು ದೇವಾಲಯಕ್ಕೆ ಹೋಗುತ್ತೇವೆ ಹೊರತು ಪೂಜಾರಿಯನ್ನಲ್ಲ. ನಮ್ಮ ದೇವರು ಬಿಜೆಪಿ ಹಾಗೂ ಮೋದಿ. ಬಸವರಾಜ ಅವರನ್ನು ಗೆಲ್ಲಿಸಿ ಅಹಂಕಾರದಿಂದ ಮೆರೆಯುವ ಸಚಿವ ತಂಗಡಗಿ ಪಿತ್ತ ಇಳಿಸಿ. ಕೆಲವರಿಗೆ ಶಾಸಕ, ಸಂಸದರನ್ನಾಗಿ ಮಾಡಿದರೂ ನಿಯತ್ತಿಲ್ಲ. ಎಲ್ಲ ಕಾಲಕ್ಕೂ ಹೆದರಿಸುವುದು, ಬೆದರಿಸುವುದು ನಡೆಯುವುದಿಲ್ಲ. ಮಗು ಒಂದೆರೆಡು ಬಾರಿ ಹಠ ಮಾಡಿದರೆ ಸುಮ್ಮನಿರುತ್ತಾರೆ. ಮೂರನೇ ಬಾರಿ ಬಾರಿಸುವಂತೆ ಬಿಜೆಪಿ ಗೆಲ್ಲಿಸಿ ನಿಮ್ಮ ನಿಯತ್ತು ತೋರಿಸಿ ಎಂದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.

ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, ಸಚಿವ ತಂಗಡಗಿ ದುರಹಂಕಾರಿ. ಮೋದಿ ಎಂದವರ ಕಪಾಳಕ್ಕೆ ಹೊಡೆಯಿರಿ ಎಂದಿದ್ದಾನೆ. ನೀವು ಮೋದಿ ಎಂದು ಕೂಗುವ ಕೂಗಿಗೆ ಅವನ ಕಿವಿ ಹಾಳಾಗಿ ಹೋಗುತ್ತವೆ. ನೀವೆಲ್ಲ ಮತಗಳ ಮೂಲಕ ಮೋದಿ ಬಲ ನೀಡಿ. ಆಗ ತಂಗಡಗಿ ಕಪಾಳಕ್ಕೆ ಹೊಡೆದಂತಾಗಲಿದೆ. ಸಿಎಂ ಸಿದ್ದರಾಮಯ್ಯ ತಮ್ಮ ಸೀಟು ಉಳಿಸಿಕೊಳ್ಳಲು ಎಲ್ಲರ ಕೈ&ಕಾಲು ಹಿಡಿಯುತ್ತಿದ್ದಾರೆ. ಲೋಕಸಭೆ ಚುನಾವಣೆ ಮುಗಿದ ತಕ್ಷಣ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯಲು ಡಿಕೆಶಿ ಅವಕಾಶ ನೀಡುವುದಿಲ್ಲ. ಹಿಟ್ನಾಳ ಬ್ರದರ್ಸ್​ ಸಂಗಣ್ಣಗೆ ಗಂಗಾವತಿ ಟಿಕೆಟ್​ ಕೊಡಿಸುವ ಭರವಸೆ ನೀಡಿ ಅನ್ಸಾರಿ ಮೇಲೆ ಪೆಟ್ರೋಲ್​ ಬಾಂಬ್​ ಹಾಕಿದ್ದಾರೆ. ರಾಯರಡ್ಡಿಗೆ ಮಂತ್ರಿ ಆಗುವಾಸೆ ಇದ್ದು, ತಂಗಡಗಿಯನ್ನು ಸಚಿವ ಸ್ಥಾನದಿಂದ ಇಳಿಸಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಹಿಟ್ನಾಳ ವಿರುದ್ಧ 50 ಸಾವಿರ ಮತಗಳ ಅಂತರದಿಂದ ಗೆದ್ದು ಅವರ ಠೇವಣಿ ಕಳೆದು ಸೊಕ್ಕು ಮುರಿಯುವೆ ಎಂದು ಸವಾಲು ಹಾಕಿದರು.

ಮಾಜಿ ಸಚಿವರಾದ ಮುರುಗೇಶ ನಿರಾಣಿ, ಬೈರತಿ ಬಸವರಾಜ, ಬಿ.ಶ್ರೀರಾಮುಲು, ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್​, ಜೆಡಿಎಸ್​ ರಾಜ್ಯ ಕೋರ್​ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ, ಮಾಜಿ ಸಚಿವರಾದ ವೆಂಕಟರಾವ ನಾಡಗೌಡ, ಹಾಲಪ್ಪ ಆಚಾರ್​, ಮಾಜಿ ಶಾಸಕರಾದ ಪ್ರತಾಪಗೌಡ, ಬಸವರಾಜ ದಢೇಸುಗೂರು, ಮಾಜಿ ಸಂಸದರಾದ ಕೆ.ವಿರುಪಾಕ್ಷಪ್ಪ, ಶಿವರಾಮೆಗೌಡ, ಮುಖಂಡ ಪೀರಾಹುಸೇನ್​ ಹೊಸಳ್ಳಿ, ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್​ ಮಾತನಾಡಿದರು.

ವಿಪ ಸದಸ್ಯೆ ಹೇಮಲತಾ ನಾಯಕ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ, ವಿಭಾಗ ಸಹ ಪ್ರಭಾರಿ ಚಂದ್ರಶೇಖರ ಹಲಗೇರಿ, ಪ್ರಮುಖರಾದ ರಾಜು ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net