

ಕೊಪ್ಪಳ: ಸಮರ್ಪಕವಾಗಿ ಕುಡಿವ ನೀರು ಪೂರೈಸುವಂತೆ ಆಗ್ರಹಿಸಿ ತಾಲೂಕಿನ ಭಾಗ್ಯನಗರ ಪಟ್ಟಣದ 18-19ನೇ ವಾರ್ಡ್ ನಿವಾಸಿಗಳು ಪಪಂ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಅಡವಿ ಆಂಜನೇಯ ಬಡಾವಣೆಗೆ ಮೂರು ತಿಂಗಳಿಂದ ನೀರು ಬರುತ್ತಿಲ್ಲ. ಈ ಬಗ್ಗೆ ಅನೇಕ ಬಾರಿ ಪಪಂ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಮನವಿ ಕೊಟ್ಟಿದ್ದೇವೆ. ಕಳೆದ ಏಪ್ರೀಲ್ 28ರಂದು ದೂರು ಪಪಂಗೆ ದೂರು ದಾಖಲಿಸಿದ್ದೇವೆ. ಪ್ರತಿ ಬಾರಿಯೂ ಸಮಸ್ಯೆ ಸರಿಪಡಿಸುವುದಾಗಿ ಹೇಳುವ ಅಧಿಕಾರಿಗಳು ಪರಿಹಾರ ನೀಡುತ್ತಿಲ್ಲವೆಂದು ಆಕ್ರೋಶ ಹೊರಹಾಕಿದರು. ಪಪಂ ಕಚೇರಿಗೆ ನುಗ್ಗಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಟ್ಯಾಂಕರ್ ಮೂಲಕ ನೀರು ಹಾಕಿಸಿಕೊಳ್ಳುತ್ತಿದ್ದೇವೆ. ನೀರಿನ ಕರ ಪಾವತಿಸುತ್ತಿದ್ದೇವೆ. ಆದರೂ ಸಮಸ್ಯೆ ಆಲಿಸುತ್ತಿಲ್ಲ. ಮುಖ್ಯಾಧಿಕಾರಿ ಸುರೇಶ ಬಬಲಾದ ಕಚೇರಿಯಲ್ಲಿ ಸಿಗುವುದಿಲ್ಲ. ವಾರ್ಡ್ ಸದಸ್ಯರೂ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಟೆಂಡರ್ ಕರೆದಿದ್ದೇವೆ. ಅನುದಾನ ಬಂದಿಲ್ಲ ಎಂಬ ಕುಂಟು ನೆಪ ಹೇಳುತ್ತಿದ್ದಾರೆಂದು ಕಿಡಿಕಾರಿದರು. ಪಪಂ ಉಪಾಧ್ಯಕ್ಷ ಹೊನ್ನೂರಸಾಬ ಬೈರಾಪುರ, ವಾರ್ಡ್ ಸದಸ್ಯ ಜಗದೀಶ ಮಾಲಗಿತ್ತಿ ಪ್ರತಿಭಟನಕಾರರನ್ನು ಸಮಾಧಾನಪಡಿಸಿದರು. ಶ್ರೀ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಮತ್ತೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ನಿವಾಸಿಗಳಾದ ಶಿವಪ್ಪ ಕೋಗಳಿ, ಗವಿಸಿದ್ದಪ್ಪ ಯಕ್ಲಾಸಪುರ, ಮಲ್ಲಿಕಾರ್ಜುನ ಸಸಿಮಠ, ಸಂದೀಪ್, ಸಾಯಿಸೋಹನ್, ವನಜಾ, ಅನಸೂಯ, ನಿರ್ಮಲಾ, ಅನಿತಾ, ಸುನಂದಾ ಇತರರಿದ್ದರು.