

ಕೊಪ್ಪಳ: ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ತಾಲೂಕಿನ ಭಾಗ್ಯನಗರದಲ್ಲಿ ಜ.22 ರಂದು ರಕ್ತದಾನ ಶಿಬಿರ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ರೀರಾಮ ಮಂದಿರ ದೇವಸ್ಥಾನ ಟ್ರಸ್ಟ್ ಸಮಿತಿ ಮುಖಂಡ ಪರಶುರಾಮ ಕಲಾಲ್ ಹೇಳಿದರು.
ನಮ್ಮ ಆರಾಧ್ಯ ದೈವ ಶ್ರೀರಾಮಚಂದ್ರ ಪ್ರಭು ದೇವಾಲಯ ನಿರ್ಮಾಣ ಆಗಿದ್ದು ಖುಷಿಯ ವಿಷಯ. ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಕಾಟಕ್ ಸಮುದಾಯ ಹಾಗೂ ಭಜರಂಗಿ ಬಂಟರ ಬಳಗದಿಂದ ಭಾಗ್ಯನಗರದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ಎರಡು ಸಂಘಟನೆಯ ಸುಮಾರು 30 ಸ್ವಯಂ ಸೇವಕರು ರಕ್ತದಾನ ಮಾಡುತ್ತೇವೆ. ಸಾರ್ವಜನಿಕರೂ ಕೂಡ ಹೆಸರು ನೋಂದಣಿ ಮಾಡಿಕೊಂಡು ರಕ್ತದಾನ ಮಾಡಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು
ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇನ್ನು ಭಾಗ್ಯನಗರ ಪಟ್ಟಣದ ಶ್ರೀರಾಮ ಮಂದಿರದಲ್ಲಿ ರಾಮ ಮೂರ್ತಿಗೆ ಬೆಳಗ್ಗೆ ಪಂಚಾಮೃತ ಅಭಿಷೇಕ ಮತ್ತು ಸಂಜೆ ದೀಪೋತ್ಸವ ಕಾರ್ಯಕ್ರಮ ಇರಲಿದೆ. ಭಜರಂಗಿ ಬಂಟರ್ ಬಳಗದ ಸಹಯೋಗದಲ್ಲಿ ಸುಮಾರು 5 ಸಾವಿರ ಮಕ್ಕಳ ರಾಮಾಯಣ ಪುಸ್ತಕ ವಿತರಣೆ ಮಾಡಲಾಗುವುದು.
ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದರು. ಆಯೋಜಕರಾದ ಡಾ.ಶಿವಕುಮಾರ ಕಂಬಳಿ, ನವೀನ್ ಕುಮಾರ ಶಿರಿಗೇರಿ, ವಿ.ಮಂಜುನಾಥ ಕಲಾಲ್, ಗೋವಿಂದರಾಜ ಇದ್ದರು.