

ಕೊಪ್ಪಳ: ಅಂಧರ ಸೇವೆ ಮಾಡುವುದೇ ನಿಜವಾದ ದೇವನ ಸೇವೆ. ವೀರೇಶ್ವರ ಪುಣ್ಯಾಶ್ರಮಕ್ಕೆ ದವಸ, ಧಾನ್ಯ, ಬೆಳ್ಳಿ, ಬಂಗಾರ ಬದಲು ಅಂಧರು, ಅನಾಥರು, ಭಿಕ್ಷುಕರನ್ನು ತಂದು ಬಿಡಿ ಎಂದು ವೀರೇಶ್ವರ ಪುಣ್ಯಾಶ್ರಮದ ಡಾ.ಪಂಡಿತ ಕಲ್ಲಯ್ಯಜ್ಜ ಹೇಳಿದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಗುರು ಪುಟ್ಟರಾಜ ಗವಾಯಿಗಳ ಮಹಿಳಾ ಸಂಗೀತ ಹಾಗೂ ಕಲಾ ಶಿಕ್ಷಣ ಸಂಸ್ಥೆಯಿಂದ ಬುಧವಾರ ಹಮ್ಮಿಕೊಂಡಿದ್ದ ಪಂಚತುಲಾಭಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜ ತಿರಸ್ಕರಿಸಿದವರ ಸೇವೆ ಮಾಡಲು ನನಗೆ ಅವಕಾಶ ಕೊಡಿ. ಅವರ ಸೇವೆಯೇ ದೈವ ಸೇವೆ ಅಂತ ನನ್ನ ಪುಟ್ಟರಾಜ ಗುರುಗಳು ಹೇಳಿಕೊಟ್ಟಿದ್ದಾರೆ. ಅವರಿಗಾಗಿ ತಮ್ಮ ಜೀವನವನ್ನೇ ಮಡಿಪಿಟ್ಟರು. ನಾನು ಅದೇ ದಾರಿಯಲ್ಲಿ ಸಾಗುವೆ. ನಿಮ್ಮ ಭಕ್ತಿ ಸೇವೆ, ಸಂಗೀತ ಸೇವೆ ಸದಾ ನಡೆಯುತ್ತಿರಲಿ ಎಂದರು.
ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಅಂಧ , ಅನಾಥರ ಬಾಳಿಗೆ ಬೆಳಕಾದ ಪುಟ್ಟರಾಜ ಗವಾಯಿಗಳವರ ಸ್ಮರಣೆ ಹಾಗೂ ಸಂಗೀತ ಕಾರ್ಯಕ್ರಮ ಏರ್ಪಡಿಸಿರುವುದು ಸಂತಸದ ಸಂಗತಿ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಲಾವಿದರ ಸಂಗೀತ ಸುಧೆ ಕೇಳುವಂಥ ಅವಕಾಶ ಕಲ್ಪಿಸಿದ ಸಂಗೀತ ಪಾಠಶಾಲೆಗೆ ಧನ್ಯವಾದಗಳನ್ನು ಸಲ್ಲಿಸಿದರು.
ಸೋಮಶೇಖರ ಹಿಟ್ನಾಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಂಡಿತ್ ರಾಜೇಂದ್ರ ನಾಕೋಡ್, ಪಂಡಿತ್ ಶಫಿಕಖಾನ್, ಪಂಡಿತ್ ಕುಮಾರ್ ಮರಡೂರ್, ಸದಾಶಿವ ಐಹೊಳೆ, ರವೀಂದ್ರ ಜಕಾತಿ, ಶಹನಾಯಿ ವಾದಕ ಮಾರುತಿ ನಾವಲಗಿ ತಮ್ಮ ರಾಗ -ಆಲಾಪ ಮೂಲಕ ಪ್ರೇಕ್ಷಕರ ಮನಕ್ಕೆ ಸವಿಯುಣಿಸಿದರು.
ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು. ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಮಹೆಬೂಬ್ ಹುಸೇನ್, ರಾಜ್ಯ ಸರ್ಕಾರಿ ನೌಕರರ ಸಂದ ಉಪಾಧ್ಯಕ್ಷ ನಾಗರಾಜ ಜುಮ್ಮನವರ, ಶಿಕ್ಷಕರ ಸಂದ ತಾಲೂಕು ಅಧ್ಯಕ್ಷ ಹೊಳಿಬಸಯ್ಯ, ಶಿವಪ್ಪ ಜೋಗಿ, ಸದಾಶಿವ ಪಾಟೀಲ, ರಾಮಣ್ಣ ಶ್ಯಾವಿ, ಬಾಳಪ್ಪ ಕಾಳೆ, ಡಾ.ಸಿದ್ಧಲಿಂಗಪ್ಪ ಕೊಟ್ನೇಕಲ್, ಚಾಂದಪಾಷಾ ಕಿಲ್ಲೇದಾರ, ಬೀರಪ್ಪ ಅಂಡಗಿ, ಮಂಜುನಾಥ ಮ್ಯಾಗಳಮನಿ, ಮಾರುತಿ ಬಿನ್ನಾಳ, ನಾಗರಾಜ ಶ್ಯಾವಿ, ಕುಮಾರ ಬಿನ್ನಾಳ, ಮಂಜುನಾಥ ಬಿ., ನಾಗರಾಜ ನಾಯಕ ಡೊಳ್ಳಿನ ಇತರರಿದ್ದರು.