

ಕೊಪ್ಪಳ: ಮಕ್ಕಳಲ್ಲಿ ಸೃಜನಾತ್ಮಕ ಚಟುವಟಿಕೆ ಕೌಶಲ ಬೆಳೆಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಯ್ಯ ಟಿ.ಎಸ್.ತಿಳಿಸಿದರು.
ತಾಲೂಕಿನ ಬಹಾದ್ದೂರ ಬಂಡಿ ಸರ್ಕಾರಿ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಉದ್ಘಾಟಿಸಿ ಮಾತನಾಡಿದರು.
ಕೇವಲ ವಿಷಯವನ್ನು ಕಂಠಪಾಠ ಮಾಡಿಸುವುದರಿಂದ ವಿದ್ಯಾರ್ಥಿಯು ಕೇವಲ ಪರೀಕ್ಷೆಯಲ್ಲಿ ಮಾತ್ರ ಮುಂದೆ ಬರಬಹುದು. ಆದರೆ ಜೀವನ ರಂಗದಲ್ಲಿ ಮುಂದೆ ಬರಲಾಗದು. ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಸೃಜನಾತ್ಮಕ ಚಟುವಟಿಕೆಗಳನ್ನು ಮೈಗೂಡಿಸಿಕೊಳ್ಳಬೇಕು. ಉತ್ತಮ ಕೌಶಲಗಳನ್ನು ತಿಳಿಸಿ. ಇದರಿಂದ ಮಕ್ಕಳಿಗೆ ವಿಷಯ ಮನನ ಆಗಲಿದೆ ಎಂದು ಸಲಹೆ ನೀಡಿದರು.
ಬಹಾದ್ದೂರ ಬಂಡಿ ಗ್ರಾಪಂ ಅಧ್ಯಕ್ಷ ಯೋಗಾನಂದ ಲೇಬಗೇರಿ ಮಾತನಾಡಿ, ಸರ್ಕಾರ ಎಲ್ಲ ಸೌಲಭ್ಯ ನೀಡಿದೆ. ಶೈಕ್ಷಣಿಕ ವಿಷಯಗಳ ಜತೆಗೆ ಪಠ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ. ಮಕ್ಕಳಲ್ಲಿನ ಪ್ರತಿಭೆ ಗುರುತಿಸಲು ಸಹಕಾರಿಯಾಗಿದೆ. ಕಲಿಕಾ ಹಬ್ಬ ವಿಭಿನ್ನ ಕಾರ್ಯಕ್ರಮ. ಮಕ್ಕಳು ಸಂಭ್ರಮದಿಂದ ಶಿಕ್ಷಣ ಪಡೆಯಿರಿ ಎಂದರು.
ಬಹಾದ್ದೂರಬಂಡಿ ಕ್ಲಸ್ಟರ್ ಸಿಆರ್ಪಿ ಹನುಮಂತಪ್ಪ ಕುರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕ ಬೀರಪ್ಪ ಅಂಡಗಿ, ಸರ್ಕಾರಿ ನೌಕರರ ಸಂಘದ ನಿರ್ದೇಶಕಿ ಬಾಲನಾಗಮ್ಮ ಅಭಿಪ್ರಾಯ ಹಂಚಿಕೊಂಡರು. ಎಸ್ಡಿಎಂಸಿ ಅಧ್ಯಕ್ಷ ಮಂಜುನಾಥ ಕುರಿ, ಗ್ರಾಪಂ ಸದಸ್ಯ ಮಹ್ಮದರಫಿ, ಉರ್ದು ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಮೌಲಾಸಾಬ ಕಮ್ಮಾರ, ಸರ್ಕಾರಿ ನೌಕರರ ಕ್ರೀಡಾ ಕಾರ್ಯದರ್ಶಿ ಶರಣಪ್ಪ ರಡ್ಡೇರ, ನಿದೇಶಕಿ ಭಾರತಿ ಹವಳೆ, ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಿರೇಶ ಅರಳಿಕಟ್ಟಿ ಇತರರಿದ್ದರು.