ಅಕ್ರಮಕ್ಕೆ ಯರ್ಯಾರ ಕೃಪಾಪೋಷ ?, ಅಧಿಕಾರಿಗಳು-ರಾಜಕಾರಣಿಗಳ ತಿಕ್ಕಾಟ

district koppal basavaraj rayaraddi letter to cm curruption
Published on

ಕೊಪ್ಪಳ: ಗಣಿ ಅಕ್ರಮ ವಿಷಯ ಸದ್ಯ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹಾಗೂ ಅಧಿಕಾರಿಗಳ ನಡುವಿನ ತಿಕ್ಕಾಟಕ್ಕೆ ವೇದಿಕೆ ಕಲ್ಪಿಸಿದೆ. ಅಧಿಕಾರಿಗಳು ಬರೆದಿದ್ದಾರೆನ್ನಲಾದ ಪತ್ರದಲ್ಲಿ ರಾಯರಡ್ಡಿಗೆ 20 ಪ್ರಶ್ನೆಗಳನ್ನು ಹಾಕುವ ಭರದಲ್ಲಿ ಅಕ್ರಮಕ್ಕೆ ತಾವಷ್ಟೇ ಅಲ್ಲದೆ, ಉನ್ನತ ಅಧಿಕಾರಿಗಳು, ಪೊಲೀಸರು ಭಾಗಿದಾರರು ಎಂಬುದನ್ನು ಬಯಲು ಮಾಡಿದೆ. ಒಟ್ಟಾರೆ ಪ್ರಹಸನ ಜಿಲ್ಲೆಯಲ್ಲಿನ ಅಕ್ರಮಗಳ ಮುಖವಾಡ ಬಯಲು ಮಾಡುತ್ತಿದ್ದು ಸರ್ಕಾರವನ್ನು ಮುಜುಗರಕ್ಕೆ ಇಡುಮಾಡುತ್ತಿದೆ.

ಅಕ್ರಮ ಮರಳುಗಾರಿಕೆಯಷ್ಟೇ ಸಾರ್ವಜನಿಕವಾಗಿ ಬಯಲಾಗಿದ್ದು ಪ್ರಕರಣ ದಾಖಲಾಗುತ್ತಿವೆ. ಸದ್ಯ ರಾಜಕಾರಣಿಗಳು&ಅಧಿಕಾರಿಗಳ ಮುಸುಕಿನ ಗುದ್ದಾಟದಲ್ಲಿ ಮರಂ ಸೇರಿ ಇನ್ನಿತರ ಕನಿಖಗಳಲ್ಲಿನ ಅಕ್ರಮದ ಮುಖವಾಡ ಕಳಚುತ್ತಿದೆ. ಅಕ್ರಮಕ್ಕೆ ಕಡಿವಾಣ ಹಾಕುವಂತೆ ರಾಯರಡ್ಡಿ ಸಿಎಂಗೆ ಪತ್ರ ಬರೆದಿದ್ದಾರೆ. ಇತ್ತ ಅಧಿಕಾರಿಗಳ ಹೆಸರಿನಲ್ಲಿ ಕೆಲವರು ರಾಯರಡ್ಡಿಗೆ 20 ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ರಾಯರಡ್ಡಿ ಹಾಗೂ ಅವರ ಬೆಂಬಲಿಗರು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಅದಕ್ಕೆ ಸಹಕಾರ ನೀಡದ್ದಕ್ಕೆ ಪತ್ರ ಬರೆಯಲಾಗಿದೆ. ಜತೆಗೆ ಗಣಿ ಮತ್ತು ಭು ವಿಜ್ಞಾನ ಇಲಾಖೆ ಅಧಿಕಾರಿಗಳಲ್ಲದೇ ಪೊಲೀಸರು, ರಾಜಕಾರಣಿಗಳ ಭಾಗಿತ್ವವನ್ನು ಉಲ್ಲೇಖಿಸಲಾಗಿದೆ. ಒಟ್ಟಾರೆ ಎಲ್ಲರೂ ಅಕ್ರಮಕ್ಕೆ ಕಾರಣರಾಗಿದ್ದೇವೆಂಬುದು ಪತ್ರದ ಸಾರಾಂಶ.

ಶಾಸಕ ಬಸವರಾಜ ರಾಯರಡ್ಡಿ ಸ್ವಗ್ರಾಮ ಕುಕನೂರು ತಾಲೂಕಿನ ತಳಕಲ್​ ಗ್ರಾಮದ ಬೆಣ್ಣಿಕೆರೆ (9.4ಎಕರೆ ) ಹೂಳು ತೆಗೆಯಲಾಗುತ್ತಿದೆ. ಅದರಿಂದ ಬಂದ ಮರಂ ಅನ್ನು ಅದೇ ಗ್ರಾಮದ ಎರಡು ಎಕರೆ ಗಾವಂಠಾಣದ ತಗ್ಗು ಪ್ರದೇಶಕ್ಕೆ ಹಾಕಲಾಗುತ್ತಿದೆ. ಇದಕ್ಕೆ ಅಧಿಕಾರಿಗಳು ರಾಜಧನ ಪಾವತಿಸುವಂತೆ ಕೇಳಿದ್ದಾರೆ. ಆದರೆ, ಕರ್ನಾಟಕ ಉಪ ಖನಿಜ ರಿಯಾಯಿತಿ ತಿದ್ದುಪಡಿ ನಿಯಮಾವಳಿ&2025ರಲ್ಲಿ ವಿನಾಯಿತಿ ಇದೆ ಎಂಬುದು ರಾಯರಡ್ಡಿ ವಾದ.

ಹೂಳು ತೆರವಿಗೆ ಅಧಿಕಾರಿಗಳು ಮೊದಲು 3ಎ(ಬಿ) ನಿಯಮದಡಿ ತೆರವಿಗೆ ಅನುಮತಿಸಿದ್ದಾರೆ. ಬಳಿಕ 3ಎ(ಎ)ಅಡಿ ಮರು ಆದೇಶ ಮಾಡಿದ್ದು, ನೀರು, ಅಂತರ್ಜಲ ಸಂರಕ್ಷಣೆಗಾಗಿ ಹೂಳು ತೆರವು ಮಾಡಿಕೊಡಲು ಅವಕಾಶ ಮಾಡಿದ್ದಾರೆ. ಇದೇ ವಿಷಯವಾಗಿ ಅಧಿಕಾರಿಗಳು&ರಾಯರಡ್ಡಿ ನಡುವೆ ನಡೆದ ಚರ್ಚೆಗಳು ಪತ್ರ ಪ್ರಹಸನಕ್ಕೆ ವೇದಿಕೆ ಕಲ್ಪಿಸಿವೆ.

ಇನ್ನು ಮಂಗಳವಾರ ಸಿಎಂ ಕಚೇರಿಯಿಂದ ಗಣಿ ಅಧಿಕಾರಿಗಳಿಗೆ ಸಿಎಂ ಕಚೇರಿಯಿಂದ ಕರೆ ಬಂದಿದ್ದು, ಪ್ರಕರಣದ ಸ್ಪಷ್ಟೀಕರಣ ಕೇಳಲಾಗಿದೆ ಎನ್ನಲಾಗಿದೆ. ಅಧಿಕಾರಿಗಳು ಸಭೆ ನಡೆಸಿದ್ದು ಮುಂದೇನು ಮಾಡಬೇಕೆಂಬ ಬಗ್ಗೆ ಚರ್ಚಿಸಿದ್ದಾರೆನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net