ಅನಾಮಧೇಯ ಪತ್ರ ಮೂಲ ತಲಾಶ್, ದೂರು ನೀಡಿದ ಅಧಿಕಾರಿಣಿ

Published on

ಕೊಪ್ಪಳ: ಗಣಿ ಅಕ್ರಮ ಪ್ರಕರಣ ಕುರಿತು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಬರೆದ ಪತ್ರ ಪ್ರಶ್ನಿಸಿ ಅಧಿಕಾರಿಗಳು ಬರೆದಿದ್ದಾರೆನ್ನಲಾದ ಪತ್ರ ಚರ್ಚೆಗೆ ಗ್ರಾಸವಾಗಿದೆ. ತಲೆದಂಡ ಸುಳಿವು ದೊರೆಯುತ್ತಲೇ ಪತ್ರ ತಮ್ಮದಲ್ಲವೆಂದು ಸ್ಪಷ್ಟನೆ ನೀಡಿದ್ದ ಅಧಿಕಾರಿ ಅನಾಮಧೇಯ ಪತ್ರ ಕುರಿತು ಎಸ್ಪಿಗೆ ದೂರು ನೀಡಿದ್ದಾರೆ.

ತಳಕಲ್ ಬೆಣ್ಣಿ ಕೆರೆ ಹೂಳು ಗ್ರಾಮದ ಗಾವಂಠಾಣದ ಗುಂಡಿ ಭರ್ತಿಗೆ ಹಾಕುವ ಸಂಬಂಧ ನಡೆದ ಪ್ರಹಸನವೇ ಒಟ್ಟಾರೆ ಪ್ರಕರಣದ ಕೆಂದ್ರಬಿಂದು. ರಾಯರಡ್ಡಿ ಪತ್ರಕ್ಕೆ ಎದುರಾಗಿ 20 ಪ್ರಶ್ನೆಗಳನ್ನು ಹಾಕಿ ಅಧಿಕಾರಿಗಳ ಹೆಸರಿನಲ್ಲಿ ಅನಾಮಧೇಯ ಪತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಪತ್ರ ಕೇವಲ ರಾಯರಡ್ಡಿ ಅಷ್ಟೇ ಅಲ್ಲದೆ, ಪೊಲೀಸರ ಕಾರ್ಯವೈಖರಿ, ಜನಪ್ರತಿನಿಧಿಗಳ ಒಡೆತನದ ಕ್ರಷರ್, ಮರಳುಗಾರಿಕೆ ಜತೆಗೆ ಭ್ರಷ್ಟಾಚಾರದಲ್ಲಿ ಎಲ್ಲರೂ ಪಾಲುದಾರರೆಂಬ ಅಂಶ ಪ್ರಚುರಪಡಿಸಿದೆ.

ಹಿರಿಯ ಭೂ ವಿಜ್ಞಾನಿ ಪುಷ್ಪಲತಾ ಕವಲೂರು ತಮ್ಮ ಇಲಾಖೆಯಿಂದ ಬರೆದ ಪತ್ರ ಅಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ. ಇದೀಗ ಮುಂದುವರೆದು ಅಧಿಕಾರಿಗಳ ಹೆಸರಿನಲ್ಲಿ ಅನಾಮಧೇಯ ಪತ್ರ ಬರೆದು ಗೊಂದಲ ಸೃಷ್ಟಿಸಿದವ ವಿರುದ್ಧ ಕ್ರಮಕ್ಕೆ ಪೊಲೀಸರಿಗೆ ದೂರು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪತ್ರ ಪೋಸ್ಟ್ ಮಾಡಿದವರು, ವೈರಲ್ ಮಾಡಿದವರ ಪತ್ತೆಗೆ ಆಗ್ರಹಿಸಿದ್ದಾರೆ. ಪತ್ರದಲ್ಲಿ ಪೊಲೀಸರ ಮೇಲೂ ಗಂಭೀರ ಆರೋಪ ಮಾಡಿದ್ದು ಪತ್ರದ ಮೂಲ ಪತ್ತೆ ಆಗುವುದಾ ಎಂಬ ಕುತೂಹಲ ಮೂಡಿಸಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net