

ಕೊಪ್ಪಳ: ರಾಜ್ಯದ ಸಾಂಸತಿಕ ನಾಯಕ, ವಿಶ್ವಗುರು ಬಸವಣ್ಣನವರ ಬಗ್ಗೆ ಅಪಮಾನಕರವಾಗಿ ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಹಿರಂಗ ಕ್ಷಮೆ ಯಾಚನೆಗೆ ಆಗ್ರಹಿಸಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಟಕ ಪದಾಧಿಕಾರಿಗಳು ಶುಕ್ರವಾರ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಬಸವಣ್ಣ ಮನುಕುಲದಲ್ಲಿ ಜಾತಿ, ಭೇದ, ವರ್ಣಗಳನ್ನು ತಿರಸ್ಕರಿಸಿದರು. ವಚನಗಳ ಮೂಲಕ ಸಮಾಜ ಸುಧಾರಣೆಗೆ ಯತ್ನಿಸಿದರು. ಎಲ್ಲರೂ ಸಮಾನರು ಎಂದು ಸಾರಿದರು. ಕಾಯಕ, ದಾಸೋಹ ಪರಿಚಯಿಸಿದರು. ಅವರ ವಿಚಾರ ರಾಜ್ಯ, ದೇಶ ಅಷ್ಟೇ ಅಲ್ಲದೆ ವಿಶ್ವಕ್ಕೆ ಮಾದರಿ. ಇಂಗ್ಲೆಂಡಿನ ಥೇಮ್ಸ್ ನದಿ ದಡದಲ್ಲಿ ಅವರ ಪ್ರತಿಮೆ ಸ್ಥಾಪಿಸಿ ವಿದೇಶಗಳು ಗೌರವಿಸುತ್ತಿವೆ. ಆದರೆ, ಶಾಸಕ ಬಸನಗೌಡ ಯತ್ನಾಳ ವಕ್ಫ ವಿಚಾರ ಮಾತನಾಡುವಾಗ ಬಸವಣ್ಣನವರ ಬಗ್ಗೆ ಅಪಮಾನಕರವಾಗಿ ಮಾತನಾಡಿದ್ದಾರೆ. ಲಿಂಗಾಯತ ಧರ್ಮದಲ್ಲಿ ಹುಟ್ಟಿ ಬಸವಣ್ಣನ ಬಗ್ಗೆ ಕೀಳಾಗಿ ಮಾತನಾಡಿದ್ದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯತ್ನಾಳ ಬಹಿರಂಗವಾಗಿ ರಾಜ್ಯದ ಜನರ ಕ್ಷಮೆ ಕೇಳಬೇಕು. ಮನಬಂದಂತೆ ಮಾತನಾಡುವುದನ್ನು ಬಿಡಬೇಕು. ಲಿಂಗಾಯತ ಧರ್ಮ ಗುರು ಬಸವಣ್ಣನವರನ್ನು ಅಪಮಾನಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಬೇಕು. ತಮ್ಮ ಅಭಿಪ್ರಾಯ ಹೇಳುವ ಭರದಲ್ಲಿ ಇನ್ನೊಬ್ಬರ ಬಗ್ಗೆ ಕೀಳಾಗಿ ಮಾತನಾಡುವುದು ತರವಲ್ಲವೆಂದು ಎಚ್ಚರಿಸಿದರು.
ಮಹಾಸಭಾ ಜಿಲ್ಲಾಧ್ಯಕ್ಷ ಹನುಮೇಶ ಕಲ್ಮಂಗಿ, ಬಸವ ಸಮಿತಿ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳೊಳ್ಳಿ, ಕದಳಿ ಮಹಿಳಾ ವೇದಿಕೆ ಜಿಲ್ಲಾಧ್ಯೆ ನಿರ್ಮಲಾ ಬಳ್ಳೊಳ್ಳಿ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಿವಕುಮಾರ ಕುಕನೂರು, ಪ್ರಮುಖರಾದ ಅರ್ಚನಾ ಸಸಿಮಠ, ಶೇಖರ ಇಂಗಳದಾಳ, ಈಶಣ್ಣ ಕೊರ್ಲಳ್ಳಿ, ರಾಜೇಶ ಸಸಿಮಠ, ಗುಡದಪ್ಪ ಹಡಪದ, ದಾನಪ್ಪ ಶೆಟ್ಟರ, ಸೌಮ್ಯ ನಾಲ್ವಾಡ, ಸಾವಿತ್ರಿ ಮುಜುಮದಾರ ಇತರರಿದ್ದರು.