ಬಸವ ಸಂಸ್ಕೃತಿ ಅಭಿಯಾನ ಸೆ.8ರಂದು

Published on

ಕೊಪ್ಪಳ: ಬಸವ ಸಂಸ್ಕೃತಿ ಅಭಿಯಾನ ಸೆ.1ರಿಂದ ರಾಜ್ಯಾದ್ಯಂತ ಆರಂಭವಾಗಿದ್ದು, ಸೆ.8ರಂದು ಕೊಪ್ಪಳದಲ್ಲಿ ಸಾರ್ವಜನಿಕ ಸಮಾರಂಭ ನಡೆಯಲಿದೆ ಎಂದು ರಾಷ್ಟ್ರೀಯ ಬಸವದಳ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳೊಳ್ಳಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಬಸವನ ಬಾಗೇವಾಡಿಯಿಂದ ಅಭಿಯಾನ ಆರಂಭವಾಗಿದೆ. ಜಿಲ್ಲೆಯಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಸಮಿತಿ, ವಿಶ್ವ ಗುರು ಬಸವೇಶ್ವರ ಟ್ರಸ್ಟ್​, ರಾಷ್ಟ್ರೀಯ ಬಸವದಳ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್​, ಕದಳಿ ವೇದಿಕೆ, ಅಕ್ಕಮಹಾದೇವಿ ಮಹಿಳಾ ಮಂಡಳ ಸೇರಿ ಇನ್ನಿತರ ಸಂಟನೆಗಳ ಸಹಯೋಗದಲ್ಲಿ ಕೊಪ್ಪಳದಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಬಸವ ತತ್ವವನ್ನು ಎಲ್ಲರ ಮನ, ಮನೆಗಳಿಗೆ ಮುಟ್ಟಿಸುವುದೇ ಅಭಿಯಾನ ಮುಖ್ಯ ಉದ್ದೇಶ ಎಂದರು.

ಸೆ.8ರಂದು ಬೆಳಗ್ಗೆ 11 ಗಂಟೆಗೆ ಕಿಡದಾಳ ಶ್ರೀ ಶಾರದಾ ಇಂಟರ್ನ್ಯಾಷನಲ್​ ಶಾಲೆಯಲ್ಲಿ ವಿವಿಧ ಮಾಠಾಧೀಶರು ಮಕ್ಕಳೊಂದಿಗೆ ವಚನ ಸಂವಾದ ನಡೆಸುವರು. ಸಂಜೆ 5ಗಂಟೆಗೆ ಕೊಪ್ಪಳದ ಬಸವೇಶ್ವರ ವೃತ್ತದಿಂದ ಮಧುಶ್ರೀ ಗಾರ್ಡನ್​ವರೆಗೆ ಪಾದಯಾತ್ರೆ ಜರುಗುವುದು. ವಚನಗ್ರಂಥ ತಲೆ ಮೇಲಿಟ್ಟುಕೊಂಡು ಮಹಿಳೆಯರು ಜಾಗೃತಿ ಮೂಡಿಸುವರು. ಬಳಿಕ ವೇದಿಕೆ ಸಮಾರಂಭ, ವಿಶೇಷ ಉಪನ್ಯಾಸ ಇರಲಿದೆ. ಶಾಸಕ ರಾವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ಇತರ ಜನಪ್ರತಿನಿಧಿಗಳು, ಗಣ್ಯರು ಭಾಗಿಯಾಗುವರು. ಮಧುಶ್ರೀ ಗಾರ್ಡನ್​ನಲ್ಲೇ ರಾತ್ರಿ 8ಕ್ಕೆ ಸಾಣೇಹಳ್ಳಿಯ ಶಿವಸಂಚಾರ ತಂಡದಿಂದ ಜಂಗಮದೆಡೆಗೆ ಹೆಸರಿನ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಬಂದವರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಪ್ರಮುಖರಾದ ಬಿ.ಎಸ್​.ಪಾಟೀಲ್​, ರಾಜೇಶ ಸಸಿಮಠ, ಶಿವರಕುಮಾರ ಕುಕನೂರು, ಶೇಖರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net