

ಕೊಪ್ಪಳ: ತಾಲೂಕಿನ ಬಸಾಪುರ ಕೆರೆಯನ್ನು ಎಂಎಸ್ಪಿಎಲ್ ಒಡೆತದನ ಕಂಪನಿ ಅಕ್ರಮವಾಗಿ ವಶಕ್ಕೆ ಪಡೆದಿದ್ದು, ತೆರವುಗೊಳಿಸಿ ಸಾರ್ವಜನಿಕ ಬಳಕೆಗೆ ನೀಡುವಂತೆ ಒತ್ತಾಯಿಸಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಸದಸ್ಯರು ಮಂಗಳವಾರ ಎಡಿಸಿ ಸಿದ್ರಾಮೇಶ್ವರಗೆ ಮನವಿ ಸಲ್ಲಿಸಿದರು.
ಎನ್ಎಚ್ 60ಕ್ಕೆ ಹೊಂದಿಕೊಂಡು 50 ಮೀಟರ್ ಅಂತರದಲ್ಲಿ ಬಸಾಪುರ ಗ್ರಾಮ ಸರ್ವೇ ನಂಬರ್ 143ರಲ್ಲಿ 44.35 ಎಕರೆ ಕೆರೆ ಇದೆ. ಇದನ್ನು ಕಂಪನಿಗೆ ಮೂಲ ಉದ್ದೇಶ ಬಳಕೆ ಷರತ್ತಿಗೆ ಒಳಪಟ್ಟು ನೀಡಲಾಗಿದೆ. ಆದರೆ, ಅದಕ್ಕೆ ಅವಕಾಶ ನೀಡುತ್ತಿಲ್ಲ. ಈ ಬಗ್ಗೆ ಸಮಿತಿ ಹೈಕೋರ್ಟ್ ಮೊರೆ ಹೋಗಿದ್ದು, ನ್ಯಾಯಾಲಯ ಸಾರ್ವಜನಿಕ ಬಳಕೆಗೆ ನೀಡುವಂತೆ ಸ್ಪಷ್ಟವಾಗಿ ಆದೇಶ ನೀಡಿದೆ. ಕಂಪನಿಯವರು ಕೆರೆ ಅತಿಕ್ರಮಿಸಿ ರಸ್ತೆ ಮಾಡಿದ್ದಾರೆ. ಸುತ್ತಲೂ ತಡೆಗೋಡೆ ನಿರ್ಮಿಸಿದ್ದಾರೆ. ನಿಮ್ಮ ಕೆಳ ಹಂತದ ಅಧಿಕಾರಿಗಳು ಕೆರೆ ಸುತ್ತಲೂ ಕಂಪನಿ ಭೂಮಿ ಇದೆ ಎಂದು ವರದಿ ನೀಡಿ ಕೈತೊಳೆದುಕೊಂಡಿದ್ದಾರೆ. ಕ್ರಮ ಕೈಗೊಳ್ಳದೆ ಕಂಪನಿಯೊಂದಿಗೆ ಶಾಮೀಲಾಗಿದ್ದಾರೆಂದು ದೂರಿದರು.
ನ್ಯಾಯಾಲಯ ಆದೇಶದಂತೆ ಕೆರೆ ಸಾರ್ವಜನಿಕ ಬಳಕೆಗೆ ನೀಡಬೇಕು. ಬಸಾಪುದರಿಂದ ಕೆರೆ ಸಂಪರ್ಕಿಸುವ ರಸ್ತೆ ಬಂದ್ ಮಾಡಿದ್ದು ಮರು ನಿರ್ಮಿಸಬೇಕು. ಕಂಪನಿ ದೊಡ್ಡ ಗೇಟ್ ನಿರ್ಮಿಸಿದ್ದು, ಭಾರಿ ವಾಹನಗಳು ಓಡಾಡುತ್ತಿವೆ. ಗೇಟ್ ತೆರವು ಮಾಡಿ ಮೊದಲಿನಂತೆ ರಸ್ತೆ ನಿರ್ಮಿಸಬೇಕು. 10&15 ಎಕರೆ ಕೆರೆ ಮುಚ್ಚಿದ್ದು, ತೆರವು ಮಾಡಬೇಕು. ಜಿಲ್ಲಾಧಿಕಾರಿ ಸಮ್ಮುಖದಲ್ಲೇ ಕರೆ ಸರ್ವೇ ನಡೆಸಿ ಹದ್ದುಬಸ್ತು ಮಾಡಬೇಕು. ಕಂಪನಿಯೊಂದಿಗೆ ಶಾಮೀಲಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಮಿತಿ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಡಿ.ಎಚ್.ಪುಜಾರ, ಬಸವರಾಜ ಶೀಲವಂತರ, ಮಹಾಂತೇಶ ಕೊತಬಾಳ, ಶರಣು ಗಡ್ಡಿ, ಕೆ.ಬಿ.ಗೋನಾಳ, ಎಸ್.ಎ.ಗಾರ್, ಮುದುಕಪ್ಪ ಹೊಸಮನಿ ಇತರರಿದ್ದರು.