ಗ್ರಾಹಕರ ಠೇವಣಿ ಮರು ಪಾವತಿಸಿ

district koppal bank depositers protest
Published on

ಕೊಪ್ಪಳ: ಖಾಸಗಿ ಕಂಪನಿಗಳಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡವರಿಗೆ ಮರು ಪಾವತಿ ಮಾಡುವಂತೆ ಒತ್ತಾಯಿಸಿ ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬ ಸದಸ್ಯರು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಖಾಸಗಿ ಕಂಪನಿಗಳು ವಿವಿಧ ಆಮಿಷ ಒಡ್ಡಿ ಗ್ರಾಹಕರಿಂದ ಕೋಟ್ಯಂತರ ರೂ. ಕೊಳ್ಳೆ ಹೊಡೆದಿವೆ. ಪ್ರಕರಣ ದಾಖಲಿಸಿಕೊಂಡ ಸರ್ಕಾರ ಕಂಪನಿಗಳನ್ನು ಸೀಜ್​ ಮಾಡಿದೆ. ಹಣ, ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ. ಅದರಂತೆ ಜಿಲ್ಲಾವಾರು ಅಧಿಕಾರಿಗಳನ್ನು ನಿಯೋಜಿಸಿ ಠೇವಣಿದಾರರ ಹಣ ಮರು ಪಾವತಿ ಜವಾಬ್ದಾರಿ ಸರ್ಕಾರ ತೆಗೆದುಕೊಂಡಿದೆ. ಆದರೆ, ಈವರೆಗೂ ಪಾವತಿಸಿಲ್ಲ. ಇದರಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ. ಕಮಿಷನ್​ಗಾಗಿ ನಿರುದ್ಯೋಗಿಗಳು ಕಂಪನಿಗಳ ಏಜೆಂಟ್​ಗಳಾಗಿ ಕೆಲಸ ಮಾಡಿದ್ದಾರೆ. ಗ್ರಾಹಕರಿಂದ ಹಣ ಕಟ್ಟಿಸಿಕೊಂಡು ಕಂಪನಿಗೆ ಕಟ್ಟಿದ್ದಾರೆ. ಅವರಿಗೂ ಠೇವಣಿದಾರರು ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಕಟ್ಟಿದ ಹಣ ವಾಪಸ್​ ಮಾಡಬೇಕು. ಠೇವಣಿದಾರರಿಂದ ಅರ್ಜಿ ಪಡೆದು ಪರಿಹಾರ ಕಲ್ಪಿಸಬೇಕು. ಇಲ್ಲವೇ ಕಂಪನಿಗಳಿಂದ ಹಣ ಕೊಡಿಸುವ ವ್ಯವಸ್ಥೆ ಮಾಡಬೇಕು. ಏಜೆಂಟ್​ಗಳಿಗೆ ಭದ್ರತೆ ನೀಡಬೇಕು. ಕಿರುಕುಳ ತಪ್ಪಿಸಬೇಕು. ವಿನಾ ಕಾರಣ ಹಲ್ಲೆ, ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು. ಪ್ರತಿಭಟನೆ ಕಾವು ಎಚ್ಚುತ್ತಲೇ ಪೊಲೀಸರು ಪ್ರತಿಭಟನಕಾರರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು. ಪ್ರತಿಭಟನಕಾರರಾದ ಹನುಮೇಶ ಕಲ್ಮಂಗಿ, ಅತ್ತಾಸಾಬ್​ ಬುಗಡಿ, ಹೇಮಂತಗೌಡ ಪಾಟೀಲ್​, ವೀರಣ್ಣ, ಗವಿಸಿದ್ದಪ್ಪ ಪಾಟೀಲ್​, ಅಂದಪ್ಪ, ಸಂಗಮೇಶ, ಶರಣಪ್ಪ ದಾನಕೈ, ನೀಲಾ ಗದ್ದಿಕೇರಿ, ಸುಮಂಗಲಾ ರಾಠೋಡ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net