

ಕೊಪ್ಪಳ: ಕಾರ್ಖಾನೆಗಳ ವಿಷ ವರ್ತುಲದಿಂದಾಗಿ ಕೊಪ್ಪಳ ಜಿಲ್ಲೆ ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದುಳಿದಿದೆ ಎಂದು ಪರಿಸರ ವಿಜ್ಞಾನಿ ನಾಗೇಶ ಹೆಗಡಿ ಕಳವಳ ವ್ಯಕ್ತಪಡಿಸಿದರು.
ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಶನಿವಾರ ಹಮ್ಮಿಕೊಂಡಿದ್ದ ಬೃಹತ್ ಕೈಗಾರಿಕೆಗಳಿಂದ ಪರಿಸರದ ಮೇಲಾದ ದುಷ್ಪರಿಣಾಮಗಳು ವಿಚಾರ ಸಂಕಿರಣದಲ್ಲಿ ಜೂಮ್ ಮೀಟಿಂಗ್ ಮೂಲಕ ಭಾಗಿಯಾಗಿ ಮಾತನಾಡಿದರು.
ಕೊಪ್ಪಳದ ಜನ ಆತಂಕದಲ್ಲಿದ್ದಾರೆ. ಇಲ್ಲಿನ ಶುದ್ಧ ಗಾಳಿ, ನೀರು, ಮಣ್ಣು ಬಳಸಿಕೊಂಡು ಬಂಡವಾಳಶಾಹಿಗಳು ಲಾಭ ಮಾಡಿಕೊಳ್ಳುತ್ತಿದ್ದಾರೆ. ಪರಿಸರ ಹಾಳು ಮಾಡಿ ಜನರಿಗೆ ವಿಷಯುಕ್ತ ವಾತಾವರಣ ನೀಡುತ್ತಿದ್ದಾರೆ. ಇದರ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕಿದೆ. ಈ ವಿಷಯದಲ್ಲಿ ಕೊಪ್ಪಳದ ಎಲ್ಲ ಜನತೆ ಒಂದಾಗಿ ಹೋರಾಟಕ್ಕೆ ಇಳಿದಿರುವುದು ಖುಷಿಯ ವಿಷಯ. ಇದರೊಂದಿಗೆ ಕಾರ್ಖಾನೆಗಳು ನಡೆಸುವ ಸಾರ್ವಜನಿಕ ಸಭೆಗಳಲ್ಲಿ ಹಾಜರಾಗಿ ನಮ್ಮ ವಿರೋಧ ದಾಖಲಿಸಬೇಕು. ಜತೆ ಜತೆಗೆ ಅಣು ವಿದ್ಯುತ್ ಸ್ಥಾವರ ಪ್ರಸ್ತಾವನೆ ಇದ್ದಲ್ಲಿ ಅದನ್ನೂ ಕೈ ಬಿಡುವಂತೆ ಹೋರಾಟದಲ್ಲಿ ಸೇರಿಸಿಕೊಳ್ಳಬೇಕಿದೆ ಎಂದರು.
ಗಾಳಿ, ನೀರು, ಪರಿಸರಕ್ಕೆ ಯಾವುದೇ ಗಡಿರೇಖೆ ಇಲ್ಲ. ಅದು ಎಲ್ಲರಿಗೂ ಸಂಬಂಧಿಸಿದೆ. ಹೀಗಾಗಿ ಅಣು ಸ್ಥಾವರ ಹೋರಾಟಕ್ಕೆ ಕೊಪ್ಪಳ ಅಷ್ಟೇ ಅಲ್ಲದೆ, ವಿಜಯನಗರ, ಬಳ್ಳಾರಿ, ರಾಯಚೂರು ಮತ್ತಿತರ ಜಿಲ್ಲೆಯ ಜನರೂ ಹೋರಾಟದಲ್ಲಿ ಭಾಗಿಯಾಗಬೇಕು. ನ್ಯೂಕ್ಲಿಯರ್ ರಿಯಾಕ್ಟರ್ ಅತ್ಯಂತ ಅಪಾಯಕಾರಿಯಾಗಿದೆ. ಜಗತ್ತಿನ ಮುಂದುವರಿದ ರಾಷ್ಟ್ರಗಳು ಅದನ್ನು ಅನುಷ್ಠಾನ ಮಾಡುತ್ತಿಲ್ಲ. ಬದಲಿಗೆ ನಮಗೆ ತಂತ್ರಜ್ಞಾನ ನೀಡುವುದಾಗಿ ಹೇಳುತ್ತವೆ. ಇದರಿಂದ ಅವರಿಗೆ ಲಾಭವಾದರೆ, ನಮಗೆ ನಷ್ಟವಾಗಲಿದೆ. ಸಂಪತ್ತಿನ ಅಸಮಾನತೆ ಹೆಚ್ಚುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಆತಂಕ ವ್ಯಕ್ತಪಡಿಸಿದರು.
ಕೃಷಿ ತಜ್ಞ ಹೇಮಂತ ರಾಮಡಗಿ ಮಾತನಾಡಿ, ನಾವು ನಮಗೆ ಸಮಸ್ಯೆ ಆದಾಗ ಮಾತ್ರ ಯೋಚಿಸುತ್ತೇವೆ. ಆದರೆ, ಮಾಲಿನ್ಯದಿಂದ ಪರಿಸರಕ್ಕೆ ಸಾಕಷ್ಟು ಧಕ್ಕೆಯಾಗುತ್ತಿದೆ. ಭೋಪಾಲ್ ಅನಿಲ ದುರಂತದಲ್ಲಿ ಸಾವಿರಾರು ಜನ ಮೃತಪಟ್ಟರೆ, ಅನೇಕರು ಅಂಗವಿಕಲರಾದರು. ಈವರೆಗೂ ಅವರಿಗೆಲ್ಲ ಪರಿಹಾರ ಸಿಕ್ಕಿಲ್ಲ. ಅಮೇರಿಕಾ ಮೂಲದ ಕಂಪನಿಗೆ ಶಿೆ ವಿಧಿಸುವ ಧೈರ್ಯ ನಮ್ಮ ಸರ್ಕಾರಕ್ಕಿದೆಯಾ ಎಂದು ಪ್ರಶ್ನಿಸಿಕೊಳ್ಳಬೇಕಿದೆ. ಧೂಳು ಹರಡುವುದರಿಂದ ಸಸ್ಯಗಳಲ್ಲಿ ದ್ಯುತಿ ಸಂಶ್ಲೇಷಣೆ ನಡೆಯುವುದಿಲ್ಲ. ಇದರಿಂದ ಹಾನಿಯಾಗಲಿದೆ ಎಂದರು.
ನಿಮ್ಮೊಳಗಿನ ಕಿಚ್ಚು ಇಂದಿನ ಕಾರ್ಯಕ್ರಮಕ್ಕೆ ಸೀಮಿತವಾಗದಿರಲಿ. ಮತ್ತೆ ಗಾಂಧಿ, ಅಂಬೇಡ್ಕರ್, ಬೋಸ್, ಆಜಾದ್ ಹುಟ್ಟಿ ಬರುವುದಿಲ್ಲ. ನಾವೇ ಹೋರಾಟದ ಮೂಲಕ ಅವರಂತಾಗಬೇಕು. ಕೈಗಾರಿಕೆಗಳಿಂದ ಏನೆಲ್ಲ ದುಷ್ಪರಿಣಾಮ ಆಗುತ್ತಿದೆ ಎಂದು ಸರ್ಕಾರ, ಉನ್ನತ ಅಧಿಕಾರಿಗಳು, ನ್ಯಾಯಾಲಯ, ತಜ್ಞರಿಗೆ ಗೊತ್ತಿದೆ. ಆದರೂ ನಾವು ಹೋರಾಟ ಮಾಡಿ ಅವರ ಗಮನ ಸೆಳೆಯಬೇಕಾ ? ಇವರೆಲ್ಲ ದನ ಕಾಯುತ್ತಿದ್ದಾರಾ ? ನಮಗೆಲ್ಲ ಬದುಕುವ ಹಕ್ಕು ಇಲ್ಲವಾ ? ನಮ್ಮ ಸಮಸ್ಯೆಗೆ ಉತ್ತರ ಕೊಡದ ಕಾನೂನು ನಮಗೇಕೆ ಬೇಕಿದೆ ಎಂದು ಪ್ರಶ್ನಿಸಿದರು.
ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಕಳೆದ 20 ವರ್ಷದಿಂದ ನಿರಂತರ ಹೋರಾಟ ಮಾಡುತ್ತಾ ಬಂದಿದ್ದೇವೆ. ಇದೀಗ ಎಂಎಸ್ಪಿಎಲ್ ಬೃಹತ್ ಕಾರ್ಖಾನೆ ನಿರ್ಮಿಸಲು ಹೊರಟಿದೆ. ನಾವೆಲ್ಲ ಒಕ್ಕೋರಲಿನಿಂದ ಇದನ್ನು ಖಂಡಿಸಬೇಕಿದೆ. ಆಳುವ ಸರ್ಕಾರ ಜನರ ಬೇಡಿಕೆಗೆ ಮನ್ನಣೆ ನೀಡಬೇಕು. ಕಾರ್ಖಾನೆಗಳಿಂದ ಆಗುವ ಅನಾಹುತಗಳ ಬಗ್ಗೆ ಅರಿಯಲು ಕೊಪ್ಪಳ ತಾಲೂಕಿನ ಗ್ರಾಮಗಳಿಗೆಭೇಟಿ ನೀಡಿ. ಅಲ್ಲಿ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ ಎಂದರು.
ಕೃಷಿ ವಿಸ್ತರಣಾ ಮುಂದಾಳು ಡಾ.ಎಂ.ವಿ.ರವಿ ಕೃಷಿ ಬೆಳೆಗಳ ಬಗೆಗಿನ ದುಷ್ಪರಿಣಾಮ ಬಗ್ಗೆ ತಿಳಿಸಿದರು. ಪ್ರಮುಖರಾದ ಡಿ.ಎಚ್.ಪುಜಾರ, ಬಸವರಾಜ ಶೀಲವಂತರ, ಶರಣಪ್ಪ ಸಜ್ಜನ, ಸೋಮರಡ್ಡಿ ಅಳವಂಡಿ ಮಾತನಾಡಿದರು.
ಹೋರಾಟಗಾರರಾದ ಜೆ.ಎಂ.ಚನ್ನಬಸಯ್ಯ, ವಿ.ಎಸ್.ಶಿವಶಂಕರ, ಎ.ಸ್ವಾಮಿ, ಜ್ಯೋತಿ ಗೊಂಡಬಾಳ, ಶರಣುಗಡ್ಡಿ, ಭೀಮಸೇನ ಕಲಿಕೇರಿ, ಬಸವರಾಜ ಸೂಳಿಭಾವಿ, ಕೆ.ಬಿ.ಗೋನಾಳ, ಖಾಸಿಂ ಸರ್ದಾರ ಇತರರಿದ್ದರು.