

ಕೊಪ್ಪಳ: ಅಂಗವಿಕಲರಿಗೆ ನಮ್ಮಂತೆ ಬದುಕುವ ಹಕ್ಕಿದೆ. ಅವರಿಗೆ ಅನುಕಂಪ ತೋರಿಸುವ ಬದಲು ಅವಕಾಶ ನೀಡೋಣ. ಈ ನಿಟ್ಟಿನಲ್ಲಿ ಎಂಎಸ್ಪಿಎಲ್ ಹಾಗೂ ಜೈಪುರದ ಭಗವಾನ ಮಹಾವೀರ ವಿಕಲಾಂಗ ಸಹಾಯತ ಸಮಿತಿ ಕೃತಕ ಕಾಲು ಜೋಡಣೆ ಶಿಬಿರ ಹಮ್ಮಿಕೊಂಡಿರುವುದು ಸ್ವಾಗತಾರ್ಹ ಎಂದು ಎಸಿ ಕ್ಯಾ.ಮಹೇಶ ಮಾಲಗಿತ್ತಿ ಹೇಳಿದರು.
ನಗರದ ಶಾದಿಮಹಲ್ನಲ್ಲಿ ಗುರುವಾರ ಎಂಎಸ್ಪಿಎಲ್ ಹಾಗೂ ಜೈಪುರದ ಭಗವಾನ ಮಹಾವೀರ ವಿಕಲಾಂಗ ಸಹಾಯತ ಸಮಿತಿಯಿಂದ ಹಮ್ಮಿಕೊಂಡಿದ್ದ ಕೃತಕ ಕಾಲು ಜೋಡಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ನಾನಾ ಕಾರಣಗಳಿಗೆ ಕಾಲು ಸೇರಿ ಇತರ ಅಂಗಗಳನ್ನು ಕಳೆದುಕೊಳ್ಳುತ್ತಾರೆ. ಕೆಲವರಿಗೆ ಹುಟ್ಟಿನಿಂದ ಅಂಗವಿಕಲತೆ ಬರುತ್ತದೆ. ಅವರಿಗೂ ನಮ್ಮಂತೆ ಬದುಕುವ ಹಕ್ಕಿದೆ. ಕೃತಕ ಅಂಗಾಂಗಳನ್ನು ಜೋಡಿಸುವುದರಿಂದ ಅವರೂ ನಮ್ಮಂತೆ ಬದುಕು ನಡೆಸಲು ನೆರವಾಗುತ್ತದೆ ಎಂದರು.
ಬಲ್ಡೋಟಾ ಸಮೂಹದ ಚೇರಮನ್ ಡಾ.ನರೇಂದ್ರ ಕುಮಾರ ಎ.ಬಲ್ಡೋಟಾ ಮಾತನಾಡಿ, ಕಳೆದ ಮೂರು ವರ್ಷದಿಂದ ಕೊಪ್ಪಳ&ಹೊಸಪೇಟೆ ಭಾಗದಲ್ಲಿ ಕೃತಕ ಕಾಲು ಜೋಡಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಮೂರು ದಿನ ಶಿಬಿರ ಇರಲಿದೆ. ಹುಟ್ಟಿನಿಂದ ಕಾಲಿನ ಅಂಗವಿಕಲತೆ ಹೊಂದಿದವರು, ಪೋಲಿಯೊ ಪೀಡಿತರು, ಆಕಸ್ಮಿಕ ಅಪಘಾತದಿಂದ ಕಾಲು ಕಳೆದುಕೊಂಡವರು ಶಿಬಿರ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವೆಂಕಟೇಶ ದೇಶಪಾಂಡೆ, ನಗರಸಭೆ ಪೌರಾಯುಕ್ತ ಸುರೇಶ ಬಬಲಾದ, ಅನಿಲ ಕುಮಾರ ಸುರಾನಾ ಮಾತನಾಡಿದರು. ಅಂಗವಿಕಲರು ಅನಿಸಿಕೆ ಹಂಚಿಕೊಂಡರು. ಅನೇಕ ಅಂಗವಿಕಲರು ಶಿಬಿರದಲ್ಲಿ ಭಾಗಿಯಾದರು.