ಕೊಪ್ಪಳ: ವಿವಿಧ ಕಾರಣಗಳಿಂದ ಪಾಲಕರಿಗೆ ಬೇಡವಾಗಿದ್ದ ಇಬ್ಬರು ಮಕ್ಕಳನ್ನು ದತ್ತು ಪ್ರಕ್ರಿಯೆ ಮೂಲಕ ಗುರುವಾರ ದತ್ತು ನೀಡಲಾಯಿತು. 5 ತಿಂಗಳ ಹೆಣ್ಣು ಮಗುವನ್ನು ದ್ವೀಪರಾಷ್ಟ್ರದ ದಂಪತಿ ದತ್ತು ಪಡೆದಿದ್ದು ಪಾಲಕರೊಂದಿಗೆ ಮಗು ವಿದೇಶಕ್ಕೆ ತೆರಳಲಿದೆ.
ಕೊಪ್ಪಳದ ಅಮೂಲ್ಯ (ಪಿ) ದತ್ತು ಸಂಸ್ಥೆಯಲ್ಲಿದ್ದ ಮಕ್ಕಳನ್ನು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಸಮ್ಮುಖದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಟಕ ಅಧಿಕಾರಿಗಳು ದತ್ತು ಪ್ರಕ್ರಿಯೆ ನಡೆಸಿದರು. ದ್ವೀಪರಾಷ್ಟ್ರ ಮಾಲ್ಟಾದ ಇಂಜಿನಿಯರಿಂಗ್ ದಂಪತಿ ಹೆಣ್ಣು ಮಗುವಿಗಾಗಿ ಕಾರಾ ಮೂಲಕ ನೋಂದಣಿ ಮಾಡಿಕೊಂಡಿದ್ದರು. ಬೇಡಿಕೆಯಂತೆ 5 ತಿಂಗಳ ಹೆಣ್ಣು ಮಗುವನ್ನು ದತ್ತು ನೀಡಲಾಯಿತು. ಹಲವು ವರ್ಷಗಳಾದರೂ ಮಕ್ಕಳಾಗದ ಕಾರಣ ದಂಪತಿ ಮಗು ದತ್ತು ಪಡೆಯಲು ಮುಂದಾಗಿದ್ದರು. ನಿಯಮಗಳನ್ನು ಪೂರೈಸಿ ಗುರುವಾರ ಮಗು ಹಸ್ತಾಂತರಿಸಲಾಯಿತು. ನೂತನ ಪಾಲಕರೊಂದಿಗೆ ಮಗು ವಿದೇಶಕ್ಕೆ ತೆರಳಲಿದೆ.
ಇನ್ನು ತಮಿಳುನಾಡಿನ ಮಧುರೈ ಮೂಲಕ ದಂಪತಿ ಗಂಡು ಮಗು ದತ್ತು ಪಡೆಯಲು ನೊಂದಾಯಿಸಿಕೊಂಡಿದ್ದರು. ಅದರಂತೆ ಕೇಂದ್ರದಲ್ಲಿದ್ದ 7 ತಿಂಗಳ ಗಂಡು ಮಗು ದತ್ತು ಪಡೆಯಲು ಒಪ್ಪಿಕೊಂಡಿದ್ದು, ಅದರಂತೆ ಮಗು ನೀಡಲಾಯಿತು. ಪತಿ ಬ್ಯಾಂಕ್ ಉದ್ಯೋಗಿ ಆದರೆ, ಪತ್ನಿ ಗೃಹಿಣಿಯಾಗಿದ್ದಾರೆ.
ಪಾಲಕ, ಪೋಷಕರಿಗೆ ಬೇಡವಾದ ಮಕ್ಕಳನ್ನು ಮಕ್ಕಳ ರಕ್ಷಣಾ ಟಕ ದತ್ತು ಪ್ರಕ್ರಿಯೆ ಮೂಲಕ ಭವಿಷ್ಯ ಕಲ್ಪಿಸುವ ಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲಿ ಕಳೆದ ವರ್ಷ 8 ಮಕ್ಕಳು, ಈ ವರ್ಷ ನಾಲ್ಕು ಮಕ್ಕಳು ದತ್ತು ಪ್ರಕ್ರಿಯೆ ಮೂಲಕ ಹೊಸ ಪಾಲಕರ ಮಡಿಲು ಸೇರಿವೆ. ಇನ್ನು ನಾಲ್ಕು ಮಕ್ಕಳು ದತ್ತು ಸಂಸ್ಥೆಯಲ್ಲಿದ್ದು, ಅವರನ್ನು ದತ್ತು ನೀಡಲು ಇಲಾಖೆ ಮುಂದಾಗಿದೆ.