

ಕೊಪ್ಪಳ: ಅಯೋಧ್ಯೆ ಶ್ರೀರಾಮ ಮಂದಿರದ ಕರ ಸೇವೆಯಲ್ಲಿ ಪಾಲ್ಗೊಂಡಿದ್ದ ಕರ ಸೇವಕರನ್ನು ಭಾನುವಾರ ನಗರದ ಈಶ್ವರ ಪಾರ್ಕ್ನಲ್ಲಿ ನಮೋ ಬ್ರಿಗೇಡ್ ಹಾಗೂ ಹಿಂದುಪರ ಸಂಟನೆಗಳಿಂದ ಸನ್ಮಾನಿಸಲಾಯಿತು.
ನಮೋ ಬ್ರಿಗೇಡ್ ತಾಲೂಕು ಸಂಚಾಲಕ ನಂದೀಶ ಮಾತನಾಡಿ, ರಾಮ ಮಂದಿರ ಉದ್ಘಾಟನೆಗೆ ಸಿದ್ಧಗೊಂಡಿದೆ. ಈ ಸಮಯದಲ್ಲಿ ಕರ ಸೇವಕರನ್ನು ರಾಜ್ಯದಲ್ಲಿ ಬಂಧಿಸಿ ದ್ವೇಷದ ರಾಜಕಾರಣ ಮಾಡಲಾಯಿತು.
ಸರ್ಕಾರದ ನಡೆ ಖಂಡಿಸಿ ಕೊಪ್ಪಳ ನಗರ ಹಾಗೂ ಕೊಪ್ಪಳ ತಾಲೂಕಿನ ಕರಸೇವಕರಿಗೆ ಗೌರವ ಸಮರ್ಪಿಸುವ ಮೂಲಕ ಕರ ಸೇವಕರೊಂದಿಗೆ ನಾವಿದ್ದೇವೆ ಎಂಬ ಸಂದೇಶ ನೀಡಿದ್ದೇವೆ. ರಾಜ್ಯ ಸರ್ಕಾರ ಕರ ಸೇವಕರು ಹಾಗೂ ರಾಮ ಸೇವಕರನ್ನು ಬಂಧಿಸುವುದಾದರೆ ಅವರ ಹಿಂದೆ ನಮೋ ಬ್ರಿಗೇಡ್ ಹಾಗೂ ಸಮಸ್ತ ಹಿಂದು ಸಮಾಜ ಇರಲಿದೆ ಎಂದರು.
ಕರ ಸೇವಕ ಅಪ್ಪಣ್ಣ ಪದಕಿ ರಾಮಮಂದಿರದ ಕರಸೇವಯಲ್ಲಿ ಪಾಲ್ಗೊಂಡ ಬಗ್ಗೆ ಮಾತನಾಡಿದರು. ವಸಂತ ಪೂಜಾರ ಶ್ರೀರಾಮ ಜನ್ಮಭೂಮಿ ಹಾಗೂ ಮಂದಿರದ ನೈಜ ಇತಿಹಾಸ ತಿಳಿಸಿದರು. ಕರ ಸೇವಕರಾದ ಕೃಷ್ಣ ಸೊರಟೂರು, ಬಾಳಭಂಟ ಜೋಷಿ, ವಿರುಪಾಕ್ಷಪ್ಪ ಬಾಗಳಿ, ನರಸಿಂಹ ಹುದ್ದಾರ ಹಾಗೂ
10ಕ್ಕೂ ಹೆಚ್ಚು ಕರಸೇವಕರನ್ನು ಸನ್ಮಾನಿಸಲಾಯಿತು. ನಮೋ ಬ್ರಿಗೇಡ್ ಸಂಚಾಲಕರಾದ ಕೇದಾರ ಸ್ವಾಮಿ, ಉಮೇಶ್, ಪ್ರಕಾಶ್, ರಾಕೇಶ್, ಮಹಾವೀರ ಜೈನ್, ಸಿದ್ದು, ಹಿಂದೂಪರ ಸಂಘಟನೆಗಳ ಉಮೇಶ್ ಕುರ್ಡೇಕರ, ಅಕ್ಷಯ, ವರುಣ್ ಇತರರಿದ್ದರು.