ಕೊಪ್ಪಳದಲ್ಲಿ ಪ್ರತಿಭಟನೆ ನಾಳೆ

Published on

ಕೊಪ್ಪಳ: ಕೇಂದ್ರ ಸರ್ಕಾರ ಸಂವಿಧಾನ ವಿರುದ್ಧವಾಗಿ ವಕ್ಫ್​ ಕಾಯ್ದೆಗೆ ತಿದ್ದುಪಡಿ ಮಾಡಿದ್ದನ್ನು ಖಂಡಿಸಿ ಮೇ 3ರಂದು ಕೊಪ್ಪಳದಲ್ಲಿ ಪ್ರತಿಭಟನಾ ಮೆರವಣಿಗೆ ಮೂಲಕ ಖಂಡಿಸಲಾಗುವುದೆಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಜಿಲ್ಲಾ ಸಮಿತಿ ಸಂಯೋಜಕರಾದ ಹಜರತ್​ ಮುಫ್ತಿ ನಜೀರ್​ ಅಹ್ಮದ್​ ಖಾದ್ರಿ ತಸ್ಕೀನ್​ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಕೇಂದ್ರ ಮಾಡಿರುವ ತಿದ್ದುಪಡಿ ಲೋಪದೋಷಗಳಿಂದ ಕೂಡಿದೆ. ಮುಸ್ಲಿಮ್​ ಅಲ್ಲದವರಿಗೂ ವಕ್ಫ್​ ಮಂಡಳಿಯಲ್ಲಿ ಪ್ರವೇಶ ನೀಡುವುದಕ್ಕೆ ಪ್ರಬಲ ವಿರೋಧವಿದೆ. ಇದು ಸಂವಿಧಾನಕ್ಕೆ ವಿರುದ್ಧವಾಗಿದೆ. ನಮ್ಮ ಆಸ್ತಿ ಲೂಟಿ ಮಾಡಲು ಬಿಜೆಪಿ ಸರ್ಕಾರ ಸಂಚು ಮಾಡುತ್ತಿದೆ. ಇದನ್ನು ಖಂಡಿಸಿ ದೇಶಾದ್ಯಂತ ಹೋರಾಟ ಮಾಡುತ್ತಿದ್ದೇವೆ. ಕೊಪ್ಪಳದ ಗಡಿಯಾರ ಕಂಬದಿಂದ ಅಶೋಕ ವೃತ್ತವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದ್ದು 10 ಸಾವಿರಕ್ಕೂ ಅಧಿಕ ಜನ ಭಾಗಿಯಾಗುವರು. ಸಮುದಾಯದ ಎಲ್ಲ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕೆಂದು ಮನವಿ ಮಾಡಿದರು.

ನಗರಸಭೆ ಅಧ್ಯಕ್ಷ ಅಮ್ಜದ್​ ಪಟೇಲ್​, ಸದಸ್ಯ ಅಜೀಮ್​ ಅತ್ತಾರ್​, ಅಂಜುಮನ್​ ಕಮಿಟಿ ಅಧ್ಯಕ್ಷ ಆಸೀಫ್​ ಕರ್ಕಿಹಳ್ಳಿ, ಮುಖಂಡರಾದ ಸಲೀಂ ಮಂಡಲಗೇರಿ ಹಾಗೂ ಕೆ.ಎಂ. ಸೈಯದ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net