

ಕೊಪ್ಪಳ: ಲೋಡಿಂಗ್ ವಿಷಯವಾಗಿ ಎಪಿಎಂಸಿ ಹಮಾಲರು ಹಾಗೂ ಚಾಲಕರ ನಡುವೆ ಉಂಟಾಗಿದ್ದ ಬಿಕ್ಕಟ್ಟು ಭಾನುವಾರ ಶಮನವಾಗಿದೆ. ಶನಿವಾರ ಕೆಲಸ ನಿಲ್ಲಿಸಿದ್ದ ಹಮಾಲರು ಷರತ್ತುಗಳಿಗೆ ಒಪ್ಪಿಕೊಳ್ಳುವ ಮೂಲಕ ಲೋಡಿಂಗ್ ಮಾಡಿದರು.
ವಾಹನಗಳ ಸಾಮರ್ಥ್ಯ ಕ್ಕಿಂತ ಹೆಚ್ಚು ತೂಕ ಲೋಡ್ ಮಾಡುವ ವಿಷಯಕ್ಕೆ ಶನಿವಾರ ಸಂಜೆ ಹಮಾಲರು, ಲಾರಿ ಚಾಲಕರ ನಡುವೆ ಗಲಾಟೆ ನಡೆದಿತ್ತು. ಹಮಾಲರ ಮೇಲೆ ಹಲ್ಲೆಯಾಗಿತ್ತು. ಇದನ್ನು ಖಂಡಿಸಿದ ಹಮಾಲರ ಸಂಘ, ಕೆಲಸ ನಿಲ್ಲಿಸಿ ಪೊಲೀಸ್ ಠಾಣೆ ಎದುರು ಪ್ರತಿಭಟಿಸಿದ್ದರು. ಪರಿಣಾಮ ಎಪಿಎಂಸಿಯಲ್ಲಿ ಆವಕ, ಜಾವಕಕ್ಕೆ ಸಮಸ್ಯೆಯಾಯಿತು. ವಾಹನಗಳು ಸಾಲುಗಟ್ಟಿ ನಿಂತ ಪರಿಣಾಮ ಟ್ರಾಫಿಕ್ ಸಮಸ್ಯೆ ಹೆಚ್ಚಿತು.
ಬಳಿಕ ವರ್ತಕರು, ಲಾರಿ ಚಾಲಕರು ಹಾಗೂ ಹಮಾಲರ ಸಂಘದ ಪ್ರತಿನಿಧಿಗಳೊಂದಿಗೆ ನಡೆದ ಮಾತುಕತೆ ಫಲಪ್ರಧವಾಯಿತು. ಹಮಾಲರ ಸಂಘ ಷರತ್ತುಬದ್ಧವಾಗಿ ಹಮಾಲಿ ಮಾಡಲು ಒಪ್ಪಿಕೊಂಡಿದೆ. ಹಲ್ಲೆ ಮಾಡಿದ ಲಾರಿ ಚಾಲಕರು ಇರುವ ಲಾರಿಯ ಹಮಾಲಿ ಮಾಡುವುದಿಲ್ಲ. ಗಾಡಿ ಸಾಮರ್ಥ್ಯಕ್ಕಿಂತ ಹೆಚ್ಚುವರಿ ಲೋಡ್ ಮಾಡುವುದಿಲ್ಲ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಮಾತ್ರ ಹಮಾಲಿ ನಡೆಯುವುದು. ರೈತರು ತಂದ ಉತ್ಪನ್ನವಾದರೆ ಒಂದು ಗಂಟೆ ಹೆಚ್ಚು ಕಮ್ಮಿ ಹಮಾಲಿ ನಡೆಯಲಿದೆ ಎಂದು ಷರತ್ತು ವಿಧಿಸಿ ಕೆಲಸ ಶುರು ಮಾಡಿದರು. ಬಳಿಕ ಟ್ರಾಫಿಕ್ ತೆರವು ಮಾಡಲಾಯಿತು.