

ಕೊಪ್ಪಳ: ಸೇವೆ ಕಾಯಂಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ರಾಜ್ಯ ಅಂಗನವಾಡಿ ನೌಕರರ ಸಂದ ಜಿಲ್ಲಾ ಪದಾಧಿಕಾರಿಗಳು ನಗರದ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಆರಂಭವಾಗಿ 50ವರ್ಷವಾಗಿದೆ. ಅಲ್ಲಿಂದ ಈವರೆಗೆ ಅಂಗನವಾಡಿ ಕಾರ್ಯಕರ್ತರು, ಸಹಾಕಿಯರು ಸೇವೆ ಸಲ್ಲಿಸುತ್ತಿದ್ದೇವೆ. ಸುಪ್ರೀಂ ಕೋರ್ಟ್, ಗುಜರಾತ್ ಹೈಕೋರ್ಟ್ ನಮ್ಮನ್ನು 3 ಮತ್ತು 4ನೇ ದರ್ಜೆ ನೌಕರರೆಂದು ಪರಿಗಣಿಸಲು ಹೇಳಿವೆ. ನಿಯಾವಳಿ ರೂಪಿಸುವಂತೆ ತಿಳಿಸಿದೆ. ಕನಿಷ್ಠ ವೇತನ ನೀಡುತ್ತಿಲ್ಲ. ಕಾಂಗ್ರೆಸ್ ಪ್ರಚಾರದಲ್ಲಿ ಹೇಳಿದಂತೆ ಗೌರವಧನ ಹೆಚ್ಚಳ ಮಾಡುತ್ತಿಲ್ಲ. 2018ರಿಂದ ಕೇಂದ್ರ ಸರ್ಕಾರ ಗೌರವಧನ ಹೆಚ್ಚಳ ಮಾಡಿಲ್ಲ. ನಿವೃತ್ತಿಯಾದವರಿಗೆ ಇಡಿಗಂಟು, ಪಿಂಚಣಿ ನೀಡುತ್ತಿಲ್ಲ. ಅಂಗನವಾಡಿಗಳನ್ನು ಬಲವರ್ದನೆ ಮಾಡುವ ಬದಲು ಶಿಕ್ಷಣ ಇಲಾಖೆಯಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸಿದ್ದು ಸರಿಯಲ್ಲವೆಂದು ಆರೋಪಿಸಿದರು.
ನಮ್ಮನ್ನು 3, 4ನೇ ದರ್ಜೆ ನೌಕರರೆಂದು ಪರಿಗಣಿಸಿ ಕಾಯಂಗೊಳಿಸಬೇಕು. ಗ್ರಾಚುಟಿ ಹಣ ಬಿಡುಗಡೆ ಮಾಡಿ. ಗೌರವಧನ ಹೆಚ್ಚಿಸಿ. ಚುನಾವಣೆಯಲ್ಲಿ ನೀಡಿದ ಭರವಸೆ ಈಡೇರಿಸಿ. ಇಸಿಡಿಎಸ್ಗೆ ಪ್ರತ್ಯೇಕ ಸಚಿವಾಲಯ ಸೃಜಿಸಿ. ಸಾಮೂಹಿಕ ಆರೋಗ್ಯ ವಿಮೆ ಜಾರಿಗೊಳಿಸಿ. ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯ ಕಲ್ಪಿಸಿ. ಪೂರಕ ಪೌಷ್ಟಿಕ ಆಹಾರಕ್ಕೆ ಜಿಎಸ್ಟಿ ವಿಧಿಸಬಾರದು. ಖಾಲಿ ಹುದ್ದೆಗಳನ್ನು 3 ತಿಂಗಳಿಗೊಮ್ಮೆ ನೇಮಕ ಮಾಡಿಕೊಳ್ಳಬೇಕು. ಮಿನಿ ಅಂಗನವಾಡಿ ಕೇಂದ್ರಗಳನ್ನು ಪೂರ್ಣ ಅಂಗನವಾಡಿ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಬೇಕೆಂದು ಒತ್ತಾಯಿಸಿದರು.
ಪ್ರಮುಖರಾದ ನಿರುಪಾದಿ ಬೆಣಕಲ್, ಕಾಸಿಂ ಸರ್ದಾರ, ಲಲಿತಾ ಆರೆರ, ಸುಜಾತಾ, ಗಂಗಮ್ಮ, ಯಮುನಾ, ಅನ್ನಪೂರ್ಣ ಸೇರಿ ಇತರರಿದ್ದರು.