ಅಮಿತ್​ ಷಾ ರಾಜೀನಾಮೆ ನೀಡಲಿ

district koppal amit sha central minister protest
Published on

ಕೊಪ್ಪಳ: ಬಾಬಾ ಸಾಹೇಬ್​ ಅಂಬೇಡ್ಕರ್​ ವಿರುದ್ಧ ಅವಹೇನಕಾರಿ ಹೇಳಿಕೆ ನೀಡಿದ ಕೇಂದ್ರ ಸಚಿವ ಅಮಿತ್​ ಷಾ ದೇಶದ ಜನರ ಕ್ಷಮೆ ಕೇಳಿ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಕರ್ನಾಟಕ ಮಾದಿಗ ಹಿತರಕ್ಷಣಾ ವೇದಿಕೆ ಜಿಲ್ಲಾ ಪದಾಧಿಕಾರಿಗಳು ಬುಧವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಅಂಬೇಡ್ಕರ್​ ಹೆಸರು ಹೇಳುವುದು ಒಂದು ವ್ಯಸನ. ಅದರ ಬದಲು ದೇವರ ಜಪ ಮಾಡುವಂತೆ ಅಮಿತ್​ ಷಾ ಹೇಳಿದ್ದಾರೆ. ಈ ಮೂಲಕ ಮನುವಾದಿ ನೀತಿ ಬೆಂಬಲಿಸಿದ್ದಾರೆ. ಸಂವಿಧಾನ ಶಿಲ್ಪಿಗೆ ಅಪಮಾನ ಮಾಡಿದ್ದಾರೆ. ಆರ್​ಎಸ್​ಎಸ್​ ನೀತಿಗಳನ್ನು ಸದನದಲ್ಲಿ ಪ್ರತಿಪಾದಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಈವರೆಗೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಪರೋಕ್ಷವಾಗಿ ಷಾ ಹೇಳಿಕೆ ಬೆಂಬಲಿಸಿದೆ. ಇಂಥವರ ಅಸಹನೆ ಸಹಿಸದೆ ಬಾಬಾ ಸಾಹೇಬರು ಹಿಂದುವಾಗಿ ಹುಟ್ಟಿದ್ದರೂ ಹಿಂದುವಾಗಿ ಸಾಯಲಾರೆ ಎಂದು ಹೇಳಿಕೆ ನೀಡಿದ್ದರೆಂದು ಆಕ್ರೋಶ ಹೊರಹಾಕಿದರು.

ಕೇಂದ್ರ ಸರ್ಕಾರ ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಬೇಕು. ಸಚಿವ ಅಮಿತ್​ ಷಾ ಅವರನ್ನು ಸಂಪುಟದಿಂದ ಉಚ್ಛಾಟಿಸಬೇಕು. ಸಂಪರಿವಾರ ಗೊಲ್ವಾಲ್ಕರ್​ ಹೇಳಿಕೆ ಹಿಂಪಡೆಯಬೇಕು. ಇಲ್ಲದಿದ್ದರೆ ಬಿಜೆಪಿ ಆರ್​ಎಸ್​ಎಸ್​ ವಿರುದ್ಧ ಹೇಳಿಕೆ ನೀಡಬೇಕು. ಇಲ್ಲವೇ ತಾನು ಸಂದ ಮುಖವಾಣಿ ಎಂದು ಒಪ್ಪಿಕೊಳ್ಳಬೇಕು. ಈ ಹೇಳಿಕೆ ಮೂಲಕ ಬಿಜೆಪಿ ನಿಜ ಬಣ್ಣ ಬಯಲಾಗಿದೆ. ಆದ ತಪ್ಪಿಗೆ ದೇಶದ ಜನರ ಮುಂದೆ ಬೇಷರತ್​ ಕ್ಷಮೆ ಹೇಳಬೇಕು ಎಂದು ಒತ್ತಾಯಿಸಿದರು.

ನಗರದ ಅಶೋಕ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರಮುಖರಾದ ಕರಿಯಪ್ಪ ಗುಡಿಮನಿ, ಮುದುಕಪ್ಪ ಹೊಸಮನಿ, ಬಸವರಾಜ ಶೀಲವಂತರ, ಎಸ್​.ಎ.ಗಾರ, ಗಾಳೆಪ್ಪ ಮುಂಗೋಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net