

ಕೊಪ್ಪಳ: ಸೃಜನಶೀಲ ಕ್ಷೇತ್ರಗಳು ಬರಡಾಗುತ್ತಿವೆ. ನಮ್ಮ ಸಂವೇದನೆ ಜೀವಂತವಾಗಿರಲು ಕಲೆ, ಸಾಹಿತ್ಯ, ಸಂಗೀತ ಮತ್ತು ಜನಪದ ಕಲೆಗಳಿಗೆ ಪ್ರೋತ್ಸಾಹ ಅಗತ್ಯ ಎಂದು ರಾಜ್ಯೋತ್ಸವ ಪುರಸತ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅಭಿಪ್ರಾಯಪಟ್ಟರು.
ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಕಲೆಗಳಿಗೆ ನಾವು ಸ್ಪಂದಿಸಬೇಕು. ಇದರಿಂದ ಜಡತ್ವ ನಿವಾರಣೆಯಾಗಲಿದೆ. ಕಿನ್ನಾಳ ಕಲೆ ಬಹಳ ಶ್ರೇಷ್ಠ. ಆದರೆ, ಕಿನ್ನಾಳ ಗ್ರಾಮ ತಲುಪುವ ರಸ್ತೆ ಸಾಕಷ್ಟು ಹಾಳಾಗಿದೆ. ಕಲಾ ಗ್ರಾಮವೆಂದು ಖ್ಯಾತಿಯಾದ ಕಿನ್ನಾಳ ಸಂಪರ್ಕಿಸುವ ರಸ್ತೆ ಸರಿಪಡಿಸಬೇಕಿದೆ. ಅದಕ್ಕೆ ಪ್ರತ್ಯೇಕ ಅಭಿಯಾನ ಆರಂಭಿಸಬೇಕಾಗಿದೆ ಎಂದರು.
ಅಂಚೆ ನಿರೀಕ್ಷಕ ಮಹಾಂತೇಶ ತೊಗರಿ ಮಾತನಾಡಿ, ನಾವೆಲ್ಲ ಕರ್ತವ್ಯಕ್ಕೆ ಸೀಮಿತವಾಗಿದ್ದೆವು. ಕೊಪ್ಪಳ ಅಂಚೆ ಕಚೇರಿಗೆ ಇರುವ ಸಾಹಿತ್ಯ, ಸಾಂಸತಿಕ ನಂಟು ನಮ್ಮನ್ನು ಇಂಥ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡಿದೆ. ಕೊಪ್ಪಳ ಅಂಚೆ ವಿಭಾಗೀಯ ಕಚೇರಿಗಾಗಿ ನಡೆದ ಹೋರಾಟದಲ್ಲಿ ಬೆಟ್ಟದೂರು ಅವರ ಪಾತ್ರ ಮಹತ್ವದ್ದು. ಕಲೆಯಲ್ಲಿ ಬದುಕು ಸವೆಸಿದ ರುಕ್ಮಿಣಿ ಬಾಯಿ ಅವರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿ ಲಭಿಸಿರುವುದು ಅಭಿನಂದನರ್ಹ ಎಂದು ಹರ್ಷಪಟ್ಟರು.
ಪ್ರಧಾನ ಅಂಚೆ ಕಚೇರಿ ಪಾಲಕ ನಾಗರಾಜ ಬಿ.ಸಾವಿತ್ರಿ ಮುಜುಮದಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾವಿತ್ರಿ ಮುಜುಮದಾರ ಪ್ರಾಯೋಜಿಸಿದ ಅಲ್ಲಮಪ್ರಭು ಬೆಟ್ಟದೂರು ಅವರ ಮೈ ಸ್ಟಾಂಪ್ ಅರ್ಪಣೆ ಮಾಡಲಾಯಿತು. ಅಂಚೆ ಇಲಾಖೆಯ ಜಿ.ಎನ್ ಹಳ್ಳಿ, ಸುಭಾಷ ಮೋಟಮ್ಮನವರ ಇತರರಿದ್ದರು.