ಅಲೆಮಾರಿಗಳನ್ನು ಮುಖ್ಯವಾಹಿನಿಗೆ ತನ್ನಿ : ಪಲ್ಲವಿ ಜಿ. ಸೂಚನೆ

Published on

ಕೊಪ್ಪಳ: ಪರಿಶಿಷ್ಟ ಜಾತಿ, ಪಂಗಡಗಳ ಅಲೆಮಾರಿ ಸಮುದಾಯದವರಿಗೆ ಸರ್ಕಾರದ ಯೋಜನೆ ಮುಟ್ಟಿಸಿ ಮುಖ್ಯವಾಹಿನಿಗೆ ತನ್ನಿ ಎಂದು ರಾಜ್ಯ ಪರಿಶಿಷ್ಟ ಜಾತಿ, ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯೆ ಪಲ್ಲವಿ ಜಿ. ಅಧಿಕಾರಿಗಳಿಗೆ ಸೂಚಿಸಿದರು.

ಅಲೆಮಾರಿಗಳ ಅಹವಾಲು ಸ್ವೀಕಾರ, ಸಮಸ್ಯೆ ಆಲಿಸಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿರುವೆ. ಇಂದಿಗೂ ಅಲೆಮಾರಿಗಳ ಸ್ಥಿತಿ ಹೀನಾಯವಾಗಿದೆ. ಅವರನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಅನೇಕ ಯೋಜನೆ ರೂಪಿಸಿದೆ. ಅನುಷ್ಠಾನ ಅಧಿಕಾರಿಗಳ ನಿಷ್ಕಾಳಜಿಯಿಂದ ಯೋಜನೆಗಳು ಅವರನ್ನು ತಲುಪುತ್ತಿಲ್ಲ. ನಿಗಮದಿಂದಲೇ ಅಲೆಮಾರಿಗಳು ವಾಸಿಸುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದೇವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಜಾಯ 51, ಪಪಂನ 23 ಮತ್ತು 25 ಆದಿವಾಸಿ ಸಮುದಾಯಗಳು ನಿಗಮದ ವ್ಯಾಪ್ತಿಗೆ ಬರಲಿವೆ. ಕಾರಟಗಿ, ಗಂಗಾವತಿ, ಕುಷ್ಟಗಿ, ಕೊಪ್ಪಳ ನಗರದ ವಿವಿಧೆಡೆ ವಾಸವಿರುವ ಅಲೆಮಾರಿ ಸಮುದಾಯದ ಕುಟುಂಬಗಳ ಸ್ಥಳ ವೀಸಿರುವೆ. ಗಂಗಾವತಿಯಲ್ಲಿ ಬುಡ್ಗಜಂಗಮ, ಶಿಳ್ಳೆಕ್ಯಾತ, ಸುಡುಗಾಡ ಸಿದ್ಧರು, ಸಿಂದೋಳು ಸೇರಿ 130 ಕುಟುಂಬಗಳು ವಾಸಿಸುತ್ತಿವೆ. ಅಲ್ಲಿಗೆ ಯಾವೊಬ್ಬ ಅಧಿಕಾರಿಗಳು ಭೇಟಿ ನೀಡಿಲ್ಲ. ಅವರಿಗೆ ಮೂಲ ಸೌಕರ್ಯ ಕಲ್ಪಿಸಿಲ್ಲ. ಆರೋಗ್ಯ ಭದ್ರತೆ ಇಲ್ಲ. ಚರಂಡಿ ಸ್ವಚ್ಛಗೊಳಿಸಿಲ್ಲ. ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿರುವೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದೆಂದರು.

ನಿಗಮದಿಂದ ಭೂ ಒಡೆತನ, ನಿವೇಶನ, ಮನೆ, ನೇರ ಸಾಲ, ಸ್ವಯಂ ಉದ್ಯೋಗ ಸಾಲ, ಶೈಕ್ಷಣಿಕ ಸಹಾಯಧನ ಸೇರಿ ಇತರ ಯೋಜನೆಗಳಿದ್ದು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೋಗಲದ, ಸಹಾಯಕ ನಿರ್ದೇಶಕ ಶರಣಪ್ಪ ಚವ್ಹಾಣ, ಅಧ್ಯೆ ವಿಶೇಷ ಕರ್ತವ್ಯಾಧಿಕಾರಿ ಆನಂದ ಏಕಲವ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net