

ಕೊಪ್ಪಳ: ತಾಲೂಕಿನ ಅಳವಂಡಿ ಗ್ರಾಮದಲ್ಲಿ ಹುಚ್ಚು ನಾಯಿ ಹಾವಳಿ ಹೆಚ್ಚಾಗಿದೆ. ಮಹಿಳೆ, ವೃದ್ಧರು ಮತ್ತು ಮಕ್ಕಳು ಸೇರಿ ಹಲವರಿಗೆ ಕಚ್ಚಿ ಗಂಭೀರವಾಗಿ ದಾಳಿ ನಡೆಸಿದೆ.
ಮಗುಗೊಂದರ ಹಣೆ ಭಾಗ, ಮಹಿಳೆಯ ಕೈ, ವೃದ್ಧನ ಹಣೆ ಮತ್ತು ಕಣ್ಣಿನ ಭಾಗ, ಕಾಲು ಸೇರಿ ಇತರ ಭಾಗಗಳಿಗೆ ಕಚ್ಚಿದೆ. ಗಂಭೀರ ಗಾಯಗಳಾಗಿದ್ದು, ಗಾಯಾಳುಗಳು ಅಳವಂಡಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಒಂದೇ ದಿನದಲ್ಲಿ 11 ಜನರಿಗೆ ಕಚ್ಚಿದ್ದು, ನಾಯಿಗೆ ಹುಚ್ಚು ಹಿಡಿದಿದೆ ಎನ್ನಲಾಗಿದೆ. ಇದರಿಂದ ಜನರು ಭಯ ಭೀತರಾಗಿದ್ದಾರೆ. ಗ್ರಾಮ ಪಂಚಾಯಿತಿ ಆಡಳಿತ ಜನರು ಮನೆಯಿಂದ ಹೊರ ಬರದಂತೆ ಮನವಿ ಮಾಡಿದೆ.
ಅಲ್ಲದೇ ನಾಯಿ ಸೆರೆಗೆ ಮುಂದಾಗಿದ್ದಾರೆ. ಸಾಮಾಜಿಕ ಜಾಲತಾಣ ಮೂಲಕ ಸಂದೇಶ ರವಾನಿಸಿ ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.