ಕೊಪ್ಪಳದಲ್ಲಿ ಬಿತ್ತೆನೆಗೆ ಸಿದ್ಧತೆ ಚುರುಕು

district koppal agriculture activities farmers
Published on

ಕೊಪ್ಪಳ: ಜಿಲ್ಲಾದ್ಯಂತ ಪೂರ್ವ ಮುಂಗಾರು ಉತ್ತಮವಾಗಿ ಆಗುತ್ತಿದೆ. ರೈತಾಪಿ ವರ್ಗ ಖುಷಿಯಾಗಿದ್ದು ಬಿತ್ತನೆಗೆ ಸಿದ್ಧತೆಗಳು ಭರದಿಂದ ಸಾಗಿವೆ.

ಏಪ್ರೀಲ್​ನಲ್ಲಿ ವಾಡಿಗೆ 20.5 ಮಿ.ಮೀ. ಮಳೆ ಇದ್ದು ವಾಸ್ತವವಾಗಿ 46.3ರಷ್ಟು ಮಳೆಯಾಗಿದೆ. ಬಹುತೇಕ ಎಲ್ಲ ತಾಲೂಕುಗಳಲ್ಲಿ ಮಳೆ ಸುರಿದಿದೆ. ಒಣ ಬೇಸಾಯ ಆಧಾರಿತ ಕುಕನೂರು, ಯಲಬುರ್ಗಾ, ಕುಷ್ಟಗಿ, ಕನಕಗಿರಿ, ಕೊಪ್ಪಳ ಭಾಗದಲ್ಲಿ ಬಿತ್ತನೆಗೆ ಸಿದ್ಧತೆಗಳು ನಡೆದಿವೆ. ಯರಿ ಭಾಗದಲ್ಲಿ ಹೆಸರು ಬಿತ್ತನೆ ಶುರುವಾಗಿದೆ. ಉಳಿದೆಡೆ ಭೂಮಿ ಹದಗೊಳಿಸುವಿಕೆ ಕಾರ್ಯ ಚುರುಕು ಪಡೆದಿದೆ. ಬಿಸಿಲಿಗೆ ಕಾದು ಕಬ್ಬಿಣದಂತಾಗಿದ್ದ ವಸುಂಧರೆ ವರುಣನ ಕೃಪೆಯಿಂದ ತಂಪಾಗಿದ್ದಾಳೆ.

ಕೃಷಿ ಇಲಾಖೆಯೂ ಬಿತ್ತೆನೆಗೆ ಬೇಕಾದ ಸಿದ್ಧತೆ ಮಾಡಿಕೊಂಡಿದೆ. 3.19 ಲಕ್ಷ ಹೆಕ್ಟೇರ್​ನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಜಿಲ್ಲಾ ಕೇಂದ್ರ ಕೊಪ್ಪಳ ತಾಲೂಕಿನಲ್ಲಿ 63,506 ಹೆಕ್ಟೇರ್​, ಕುಷ್ಟಗಿ 80,034, ಯಲಬುರ್ಗಾ 57,789, ಕುಕನೂರು 29,927, ಗಂಗಾವತಿ 24,589, ಕಾರಟಗಿ 31,022 ಹಾಗೂ ಕನಕಗಿರಿ ತಾಲೂಕಿನಲ್ಲಿ 32,489 ಒಟ್ಟು 3,19,356 ಹೆಕ್ಟೇರ್​ ಪ್ರದೇಶದಲ್ಲಿ ಬಿತ್ತನೆಗೆ ಗುರಿ ಹಾಕಿಕೊಳ್ಳಲಾಗಿದೆ. ಈ ಪೈಕಿ 62,000 ಹೆಕ್ಟೇರ್​ ಭತ್ತ, 2500 ಹೆಕ್ಟೇರ್​ ಜೋಳ, 1,00,057 ಹೆ. ಮೆಕ್ಕೆಜೋಳ, 64,372 ಹೆ. ಸಜ್ಜೆ, 20,000 ಹೆ. ತೊರಗಿ, 3,556 ಹೆ. ಹುರುಳಿ, 15,411 ಹೆ. ಹೆಸರು, 10,652 ಹೆ. ಶೇಂಗಾ, 16,164 ಹೆ. ಸೂರ್ಯಕಾಂತಿ, 11,686 ಹೆ. ಹತ್ತಿ ಬಿತ್ತನೆಗೆ ತಯಾರಿ ನಡೆದಿದೆ.

8,800 ಕ್ವಿಂಟಾಲ್​ ಬಿತ್ತನೆ ಬೀಜಕ್ಕೆ ಬೇಡಿಕೆ ಸಲ್ಲಿಸಿದ್ದು ವಿತರಣೆಗೆ ಇಲಾಖೆ ಸಿದ್ಧವಾಗುತ್ತಿದೆ. 20 ರೈತ ಸಂಪರ್ಕ ಕೇಂದ್ರಗಳು ಹಾಗೂ ಹಿರೇ ಸಿಂದೋಗಿ, ಬೇವೂರು, ಚಳಗೇರಾ, ದೋಟಿಹಾಳ, ತಳಕಲ್​ ಹೆಚ್ಚುವರಿ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆಯಾಗಲಿದೆ. ರಸಗೊಬ್ಬರಕ್ಕೂ ಬೇಡಿಕೆ ಸಲ್ಲಿಸಿದ್ದು, ಸದ್ಯ 33,716 ಟನ್​ ದಾಸ್ತಾನು ಸಂಗ್ರಹವಿದೆ. 2,397 ಟನ್​ ಡಿಎಪಿ, 2,165 ಟನ್​ ಎಂಒಪಿ, 15,345 ಟನ್​ ಕಾಂಪ್ಲೆಕ್ಸ್​, 13,108 ಟನ್​ ಯೂರಿಯಾ, 699 ಟನ್​ ಎಸ್​ಎಸ್​ಪಿ ದಾಸ್ತಾನಿದ್ದು, ಆಯಾ ತಿಂಗಳ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗಲಿದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕನಕಗಿರಿಲೀ ಅಧಿಕ ಮಳೆ: ಪ್ರಸಕ್ತ ತಿಂಗಳಲ್ಲಿ ಜಿಲ್ಲಾದ್ಯಂತ ವಾಡಿಕೆ ಮಳೆಗಿಂತ ಅಧಿಕ ಮಳೆಯಾಗಿದೆ. ಗಂಗಾವತಿ ತಾಲೂಕಿನಲ್ಲಿ 30.2 ಮಿ.ಮೀ., ಕೊಪ್ಪಳ 47.5, ಕುಷ್ಟಗಿ 45.3, ಯಲಬುರ್ಗಾ 49.3, ಕಾರಟಗಿ 17.08, ಕುಕನೂರು 56.4 ಹಾಗೂ ಕನಕಗಿರಿ ತಾಲೂಕಿನಲ್ಲಿ 66.00 ಮಿ.ಮೀ.ನಷ್ಟು ಮಳೆ ಸುರಿದಿದೆ. ಕಾರಟಗಿಯಲ್ಲಿ ವಾಡಿಕೆಯಷ್ಟು ಮಳೆಯಾದರೆ, ಕನಕಗಿರಿಯಲ್ಲಿ ಶೇ.50ರಷ್ಟು ಹೆಚ್ಚುವರಿ ಮಳೆಯಾಗಿದೆ. ಉಳಿದ ತಾಲೂಕುಗಳಲ್ಲಿ ವಾಡಿಕೆಗಿಂತ ಶೇ.100ರಷ್ಟು ಹೆಚ್ಚುವರಿ ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net