

ಕೊಪ್ಪಳ: ಕೃಷಿ ರಂಗ ಬೆಳವಣಿಗೆಯಾದರೆ ದೇಶದ ಪ್ರಗತಿ ಆಗಲಿದೆ. ಕೃಷಿ ಪರಿಕರ ಮಾರಾಟಗಾರರು ಹೆಚ್ಚು ರೈತರ ಸಂಪರ್ಕದಲ್ಲಿರುವುದರಿಂದ ಸರಿಯಾದ ತಿಳಿವಳಿಕೆ ನೀಡಿ ಎಂದು ಜಿಪಂ ಸಿಇಒ ವರ್ಣಿತ್ ನೇಗಿ ತಿಳಿಸಿದರು.
ನಗರದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಕೃಷಿ ಇಲಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ ಕೃಷಿ ಪರಿಕರ ಮಾರಾಟಗಾರರಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅನ್ನದಾತರು ಕೃಷಿ ಅಧಿಕಾರಿಗಳು, ವಿಜ್ಞಾನಿಗಳ ಬಳಿ ಬಂದು ಹೆಚ್ಚು ಮಾಹಿತಿ ಪಡೆಯುವುದಿಲ್ಲ. ಕೃಷಿ ಪರಿಕರ ಮಾರಾಟಗಾರರ ಸಂಪರ್ಕದಲ್ಲಿ ಹೆಚ್ಚಾಗಿರುತ್ತಾರೆ. ಹೀಗಾಗಿ ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಹೊಲಕ್ಕೆ ಎಷ್ಟು ಪ್ರಮಾಣದಲ್ಲಿ ಬೀಜ, ಗೊಬ್ಬರ, ಕೀಟನಾಶಕ ಬಳಕೆ ಮಾಡಬೇಕೆಂಬ ಬಗ್ಗೆ ಸರಿಯಾದ ಮಾಹಿತಿ ನೀಡಿ ಎಂದು ಸಲಹೆ ನೀಡಿದರು.
ಧಾರವಾಡ ಕೃಷಿ ವಿವಿ ಪ್ರಾಧ್ಯಾಪಕ ಡಾ.ಎಸ್.ಎನ್.ಜಾಧವ ಮಾತನಾಡಿ, 2025-&26 ನೇ ಸಾಲಿನಲ್ಲಿ ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ ದೇಶಿ ಪ್ರಮಾಣಪತ್ರಗಳನ್ನು ಕೊಡುವ ಕೆಲಸ ಮಾಡಿದ್ದೇವೆ. ತರಬೇತಿ ಅವಧಿಯಲ್ಲಿ ಕೃಷಿ, ತೋಟಗಾರಿಕೆ ಸೇರಿ ಸಮಗ್ರ ಬೆಳೆಗಳ ಮಾಹಿತಿ ನೀಡಲಾಗಿದೆ. ಪ್ರಮಾಣ ಪತ್ರ ಪಡೆದ ಬಳಿಕ ನಿಮ್ಮ ಜವಾಬ್ದಾರಿ ಹೆಚ್ಚಲಿದೆ. ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳನ್ನು ರೈತರಿಗೆ ಮುಟ್ಟಿಸಿ ಎಂದರು.
ವಿಸ್ತರಣಾ ನಿರ್ದೇಶಕ ಡಾ.ಎಂ.ವಿ.ಮಂಜುನಾಥ ಮಾತನಾಡಿ, 48 ವಾರಗಳ ದೇಶಿ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿದೆ. ಮಣ್ಣಿನ ಫಲವತ್ತತೆ, ಸಮಗ್ರ ಕೃಷಿ ಪದ್ಧತಿ, ಜಾನುವಾರು, ತೋಟಗಾರಿಕೆ ಬೆಳೆ, ಹನಿ ನೀರಾವರಿ ಸೇರಿ ಇತರ ಮಾಹಿತಿ ನೀಡಲಾಗಿದೆ. ರೈತರಿಗೆ ಗುಣಮಟ್ಟದ ಪರಿಕರ ಪೂರೈಸಿ. ಸಮಸ್ಯೆಗಳನ್ನು ಆಲಸಿ ಸರಿಯಾದ ಪರಿಹಾರ ಒದಗಿಸಿ ಎಂದು ತಿಳಿಸಿದರು.
ಕೃಷಿ ತಂತ್ರಜ್ಞ ಸಂಸ್ಥೆ ಉಪಾಧ್ಯಕ್ಷ ವೀರಣ್ಣ ಕಮತರ, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಮಾತನಾಡಿದರು. 48 ದಿನಗಳ ತರಬೇತಿ ಪಡೆದ 80 ಕೃಷಿ ಪರಿಕರಗಳ ಮಾರಾಟಗಾರರಿಗೆ ಪ್ರಮಾಣ ಪತ್ರ ನೀಡಿ ಪ್ರಮಾಣ ವಚನ ಬೋಧಿಸಲಾಯಿತು.
ಉಪ ಕೃಷಿ ನಿರ್ದೇಶಕ ಸಿದ್ಧೇಶ್ವರ ಎಲ್., ಮೀನುಗಾರಿಕೆ ಉಪನಿರ್ದೇಶಕ ಡಾ.ಶ್ರೀನಿವಾಸ ಕುಲಕರ್ಣಿ, ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಡಾ.ಚಂದ್ರಕಾಂತ ನಾಡಗೌಡ, ಫೆಸಿಲಿಟೇಟರ್ ಜಂಬಣ್ಣ ಐಲಿ, ಮಹೇಶ್ವರ ಶಾಸ್ತ್ರಿ ಇತರರಿದ್ದರು.